ಬಿಎಲ್‌ಎ -2 ಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಂಗ್ರೆಸ್ ಸಾಂಪ್ರದಾಯಿಕ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸುವಲ್ಲಿ ಬಿಎಲ್‌ಒ-2 ಗಳು ಕಾಳಜಿ ವಹಿಸಿದಲ್ಲಿ ಮಾತ್ರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಟ್ಟಿಯಾಗಿ ಎದುರಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಎಲ್‌ಎ -2 ಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಮಾ.31 ಕ್ಕೆ ಬೂತ್‌ಮಟ್ಟಲ್ಲಿ ಮ್ಯಾಪಿಂಗ್ ಮಾಡುವುದು ಕೊನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮ್ಯಾಪಿಂಗ್ ನಲ್ಲಿ ನಮ್ಮ ಪಕ್ಷದ ಮತದಾರರೆ ಹಿಂದುಳಿದಿದ್ದಾರೆ. 51 ಸಾವಿರ ಮತದಾರರು ಕ್ಷೇತ್ರದಲ್ಲಿ ಮ್ಯಾಪಿಂಗ್ ಆಗಿಲ್ಲ. ಅದರಲ್ಲೂ ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರೇ ಕೈಬಿಟ್ಟು ಹೋಗಿದ್ದಾರೆ. ಸದ್ಯದಲ್ಲೇ ಗ್ರಾಮ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಇದರಲ್ಲಿ ನಮ್ಮ ಕಾರ್ಯಕರ್ತರೇ ಚುನಾವಣೆಯಲ್ಲಿ ನಿಲ್ಲಲಿದ್ದಾರೆ. ನಮ್ಮ ಕಾರ್ಯ ಕರ್ತರ ಚುನಾವಣೆಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ ಈ ಕಾರ್ಯಗಾರ ಅತಿ ಮುಖ್ಯವಾಗಿದೆ ಎಂದರು.ಮ್ಯಾಪಿಂಗ್ ನಲ್ಲಿ 56 ಸಾವಿರ ಅಂದರೆ ಒಂದು ಬೂತ್‌ನಲ್ಲಿ 200 ಮತದಾರರು ಮ್ಯಾಪಿಂಗ್ ಆಗಿಲ್ಲ. ಒಂದು ಮತದಲ್ಲಿ ಗೆದ್ದರೂ ಅದು ಗೆಲುವೆ. ಹೀಗಾಗಿ ಒಂದೊಂದು ಮತಕ್ಕೂ ಮಹತ್ವ ಇದೆ. ನಮ್ಮ ಕಾಂಗ್ರೆಸ್ ಪಕ್ಷದ ಸಾಪ್ರದಾಯಿಕ ಮತಗಳೇ ಮ್ಯಾಪಿಂಗ್ ಆಗಿಲ್ಲದ ಹಿನ್ನೆಲೆಯಲ್ಲಿ ಇಲ್ಲಿರುವ ಎಲ್ಲ ಕಾರ್ಯಕರ್ತರು ತಮ್ಮ ಆತ್ಮ ಸಾಕ್ಷಿಗನುಗುಣವಾಗಿ ತಮ್ಮ ಬೂತ್‌ನಲ್ಲಿ ಮತ ಪರಿಶೀಲಿಸಿ ಬಿಟ್ಟು ಹೋಗಿದ್ದವರ ಹೆಸರನ್ನು ಸೇರ್ಪಡೆ ಜತೆಗೆ ಹೊಸ ಮತದಾರರ ಹೆಸರು ಸೇರಿಸಬೇಕು. ಅವರವರ ಬೂತ್‌ನಲ್ಲಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದು. ಬಿಜೆಪಿಯಲ್ಲಿ ಗ್ರಾಪಂನಿಂದ ಪ್ರಧಾನಿವರಗೆ ಬಿಎಲ್‌ಒ-2 ಗಳಾಗಿದ್ದಾರೆ ಎಂಬುದನ್ನು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಸಂಸದರು, ಶಾಸಕರನ್ನು ಗೆಲ್ಲಿಸುವಂತಹ ಚುನಾವಣೆಯಲ್ಲಿ ಪಕ್ಷ ಸಕ್ರಿಯ ಆಗುವುದು ಸಹಜ. ನಮ್ಮ ಪಕ್ಷ ಉಳಿಯಬೇಕೆಂದರೆ ಕಾರ್ಯಕರ್ತರು ಬೆನ್ನೆಲುಬಾಗಿ ನಿಲ್ಲಬೇಕು. ನಮ್ಮ ಸಕ್ರಿಯ ಕಾರ್ಯಕರ್ತರು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸದೃಢ ಆಗುವ ನಿಟ್ಟಿನಲ್ಲಿ ಇಂದಿನ ತರಬೇತಿ ಮಹತ್ವದ್ದು ಎಂದರು.
ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಬಿಎಲ್‌ಎ-2 ಅವರನ್ನು ಬದಲಾವಣೆ ಮಾಡಬಾರದು. ಅವರನ್ನೇ ಬೂತ್ ಹೆಡ್ ಆಗಿ ಮಾಡಬೇಕು. ಆಗ ಪಕ್ಷ ಸಂಘಟನೆ ಯಾಗುತ್ತದೆ. ಪದೇ ಪದೆ ಬದಲಾಯಿಸುತ್ತಿದ್ದರೆ ಪಕ್ಷಕ್ಕೆ ಪೆಟ್ಟು ಬೀಳಲಿದೆ ಎಂದರು.
ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಮಾತನಾಡಿ, ಬಡವರು, ದೀನ ದಲಿತರು ಮತ್ತು ಜನಸಾಮಾವನ್ಯರ ಪರವಾಗಿ ಕೆಲಸ ಮಾಡುವಂತಹ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಬಡವರ ಪರವಾದ ಹಲವು ಯೋಜನೆಗಳು ಹಿಂದಿನಿಂದ ಅನುಷ್ಠಾನ ಆಗಿರುವುದು ಇದಕ್ಕೆ ಸಾಕ್ಷಿ ಎಂದರು.ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್, ಪ್ರಚಾರ ಸಮಿತಿ ಅಧ್ಯಕ್ಷ ಷರೀಫ್, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ಸಿಡಿಎ ಮಾಜಿ ಅಧ್ಯಕ್ಷ ನಯಾಜ್, ಕೆಫೆಕ್ ಅಧ್ಯಕ್ಷ ಹರೀಶ್, ಗ್ಯಾರಂಟಿ ಪ್ರಾಕಾರದ ಅಧ್ಯಕ್ಷ ಶಿವಾನಂದಸ್ವಾಮಿ, ಮಲ್ಲೇಶಸ್ವಾಮಿ ಮತ್ತಿತರರಿದ್ದರು.
