ಕಾರ್ಯಕರ್ತರೇ ಬಿಜೆಪಿ ಜೀವಾಳ: ರೂಪಾಲಿ ಎಸ್. ನಾಯ್ಕ

| Published : Nov 11 2024, 12:45 AM IST

ಸಾರಾಂಶ

ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷದಲ್ಲಿ ಪ್ರಬಲವಾಗಿ ಬೆಳೆಯಬೇಕು. ಕಾರ್ಯಕರ್ತರು ಪ್ರಬಲವಾದಷ್ಟೂ ಪಕ್ಷ ಬಲಿಷ್ಠವಾಗುತ್ತದೆ. ಸದಸ್ಯತ್ವ ನೋಂದಣಿ ಕೆಲಸವನ್ನು ಕಾರ್ಯಕರ್ತರು, ಪದಾಧಿಕಾರಿಗಳು ಶ್ರಮವಹಿಸಿ ಮಾಡಿದ್ದಾರೆ.

ಕಾರವಾರ: ಕಾರ್ಯಕರ್ತರು ಪಕ್ಷದ ಬೆನ್ನೆಲುಬು. ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ. ಪಕ್ಷಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರಿಗೆ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತಿಳಿಸಿದರು.

ಭಾನುವಾರ ಬಿಜೆಪಿ ಗ್ರಾಮೀಣ ಮಂಡಲದಿಂದ ಕಾರವಾರದ ಸಾಗರ ದರ್ಶನ ಸಭಾ ಭವನ ಹಾಗೂ ನಗರ ಮಂಡಲದಿಂದ ಸಂಘಟನಾ ಪರ್ವ 2024, ವಿಶೇಷ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷದಲ್ಲಿ ಪ್ರಬಲವಾಗಿ ಬೆಳೆಯಬೇಕು. ಕಾರ್ಯಕರ್ತರು ಪ್ರಬಲವಾದಷ್ಟೂ ಪಕ್ಷ ಬಲಿಷ್ಠವಾಗುತ್ತದೆ. ಸದಸ್ಯತ್ವ ನೋಂದಣಿ ಕೆಲಸವನ್ನು ಕಾರ್ಯಕರ್ತರು, ಪದಾಧಿಕಾರಿಗಳು ಶ್ರಮವಹಿಸಿ ಮಾಡಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಚುನಾವಣೆ ಬರಲಿದೆ. ನಮ್ಮ ಕಾರ್ಯಕರ್ತರು ಜಯಶಾಲಿಯಾಗಬೇಕು. ಜತೆಗೆ ಪಕ್ಷಕ್ಕೆ ಇನ್ನಷ್ಟು ಭದ್ರವಾದ ಬುನಾದಿ ಹಾಕಬೇಕು ಎಂದು ವಿನಂತಿಸಿದರು.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನವರಿಕೆ ಮಾಡಬೇಕು. ನರೇಂದ್ರ ಮೋದಿ ಅವರು ನಿಸ್ವಾರ್ಥದಿಂದ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ಫಲವಾಗಿ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಗೌರವ ಸಿಗುತ್ತಿದೆ. ಭಾರತ ವಿಶ್ವದ ಅತಿ ಬಲಾಢ್ಯ ದೇಶಗಳ ಸಾಲಿನಲ್ಲಿ ಸೇರ್ಪಡೆಯಾಗಿದೆ. ಇದು ಎಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಪಕ್ಷಕ್ಕೆ ಮತ್ತಷ್ಟು ಸೇವೆ ಸಲ್ಲಿಸುವ ಮೂಲಕ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಸಂಘಟನಾ ಪರ್ವದ ಗೋವಿಂದ ನಾಯ್ಕ್ ಮಾತನಾಡಿ, ಸಂಘಟನೆ ಬಲಗೊಂಡರೆ ಚುನಾವಣೆಯನ್ನು ಯಶಸ್ವಿಯಾಗಿ ಗೆಲ್ಲಬಹುದು. ಪಕ್ಷದ ಯಶಸ್ಸು ಕಾರ್ಯಕರ್ತರನ್ನು ಅವಲಂಬಿಸಿದೆ ಎಂದರು.

ನಗರ ಪ್ರಭಾರಿ ರಾಜು ಭಂಡಾರಿ ಮಾತನಾಡಿ, ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು ಎಂದು ವಿನಂತಿಸಿದರು.

ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ಸುಬ್ರಾಯ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಸುನಿಲ್ ಸೋನಿ, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಎಲ್ಲ ಮೋರ್ಚಾದವರು, ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಲಾಯಿತು. ಗ್ರಾಮೀಣ ಮಂಡಲದ ಸುಭಾಷ ಗುನಗಿ ಹಾಗೂ ನಗರ ಮಂಡಲದ ನಾಗೇಶ ಕುರ್ಡೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸೂರಜ್ ದೇಸಾಯಿ ಸ್ವಾಗತಿಸಿದರು.

ಹಲವರಿಗೆ ಸನ್ಮಾನ...

ಬಿಜೆಪಿ ಬೂತ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸುಭಾಷ ಗುನಗಿ, ನಾಗೇಶ ಕುರ್ಡೇಕರ, ಸಂಜಯ ಸಾಳುಂಕೆ, ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿಶನ್ ಕಾಂಬ್ಳೆ ಮತ್ತಿತರರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಸನ್ಮಾನ ಮಾಡಿ ಗೌರವ ಸಲ್ಲಿಸಿದರು.