ಕಾರ್ಯಕರ್ತರ ಗದ್ದಲ, ಸಭೆ ಮೊಟಕುಗೊಳಿಸಿ ನಡೆದ ಬೊಮ್ಮಾಯಿ

| Published : Mar 16 2024, 01:45 AM IST

ಸಾರಾಂಶ

ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಕಾರ್ಯಕರ್ತರು ಗದ್ದಲ ನಡೆಸಿದ್ದರಿಂದ ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ಸಭೆ ಮೊಟಕುಗೊಳಿಸಿ ಹೊರ ನಡೆದ ಪ್ರಸಂಗ ನಡೆಯಿತು.

ಹಾವೇರಿ: ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಕಾರ್ಯಕರ್ತರು ಗದ್ದಲ ನಡೆಸಿದ್ದರಿಂದ ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ಸಭೆ ಮೊಟಕುಗೊಳಿಸಿ ಹೊರ ನಡೆದ ಪ್ರಸಂಗ ನಡೆಯಿತು. ಟಿಕೆಟ್‌ ಘೋಷಣೆ ಬಳಿಕ ಮೊದಲ ಬಾರಿಗೆ ಆಗಮಿಸಿದ್ದ ಅವರು, ಇಲ್ಲಿಯ ಪಕ್ಷದ ಜಿಲ್ಲಾ ಕಾರ್ಯಾಲಯಕ್ಕೆ ಬೈಕ್‌ ರ್‍ಯಾಲಿ ಮೂಲಕ ಆಗಮಿಸುತ್ತಿದ್ದಂತೆ ಸೇರಿದ್ದ ನೂರಾರು ಕಾರ್ಯಕರ್ತರು ಗದ್ದಲ ಶುರುಮಾಡಿದರು. ಬೊಮ್ಮಾಯಿ ಅವರೊಂದಿಗೆ ಬರುತ್ತಿದ್ದ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಅವರ ವಿರುದ್ಧ ಆಕ್ರೋಶ ಹೊರಹಾಕಿದರು. ಹಾವೇರಿ ಗ್ರಾಮೀಣ ಮತ್ತು ನಗರ ಘಟಕದ ಅಧ್ಯಕ್ಷರನ್ನು ಬದಲಾಯಿಸುವಂತೆ ಆಗ್ರಹಿಸಿದರು. ಆಕ್ರೋಶಿತ ಕೆಲ ಕಾರ್ಯಕರ್ತರು ಜಿಲ್ಲಾಧ್ಯಕ್ಷರನ್ನು ಹಿಡಿದು ಎಳೆದಾಡಿದರು. ಪಕ್ಷದ ಕಾರ್ಯಾಲಯ ಪ್ರವೇಶಿಸುತ್ತಿದ್ದಂತೆ ಗದ್ದಲ ಹೆಚ್ಚಾಯಿತು. ಪರಿಸ್ಥಿತಿ ಅರ್ಥ ಮಾಡಿಕೊಂಡ ಬಸವರಾಜ ಬೊಮ್ಮಾಯಿ ಮಾತನಾಡಲು ಶುರು ಮಾಡಿದರೂ ಕಾರ್ಯಕರ್ತರ ಗದ್ದಲ ಮುಂದುವರಿಯಿತು. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ, ಆದರೆ, ನಗರದ ವ್ಯಕ್ತಿಯನ್ನು ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಎರಡೂ ಘಟಕದ ಅಧ್ಯಕ್ಷರನ್ನು ಬದಲಾಯಿಸಲೇಬೇಕು ಎಂದು ಒತ್ತಾಯಿಸಿದರು. ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾರ್ಯಕರ್ತರ ಭಾವನೆ ಅರ್ಥವಾಗಿದೆ. ಎಲ್ಲರೂ ನನ್ನ ಅಭಿಮಾನಿಗಳಾಗಿದ್ದೀರಿ. ಕೂಡಲೇ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿ, ಎರಡೂ ಘಟಕಗಳ ಅಧ್ಯಕ್ಷರ ಬದಲಾವಣೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಆಗಲೂ ಕಾರ್ಯಕರ್ತರ ಗದ್ದಲ ಮುಂದುವರಿದಿದ್ದರಿಂದ ಸಭೆಯನ್ನು ಅಲ್ಲಿಗೇ ಮೊಟಕುಗೊಳಿಸಿ ಬೊಮ್ಮಾಯಿ ಹೊರನಡೆದರು. ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಾವೇರಿ ಗ್ರಾಮೀಣ ಮತ್ತು ನಗರ ಘಟಕದ ಅಧ್ಯಕ್ಷರ ನೇಮಕದ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಸರಿಪಡಿಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.