ಹಕ್ಕು ಪಡೆಯಲು ಕಾರ್ಮಿಕರು ಒಂದಾಗಬೇಕು

| Published : May 06 2025, 12:17 AM IST

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಾರ್ಮಿಕರ ಹಕ್ಕುಗಳ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ದುಡಿಯುವ ಕಾರ್ಮಿಕ ವರ್ಗದವರಿಗೆ ಸಿಗಬೇಕಾಗಿರುವ ಹಕ್ಕುಗಳನ್ನು ಕಸಿದುಕೊಂಡ ಪರಿಣಾಮ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಕಾರ್ಮಿಕರಿಗೆ ಸಿಗಬೇಕಾದ ಹಕ್ಕುಗಳು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಹಾಗೂ ಮಾನವ ಶ್ರಮವನ್ನು ದೋಚುತ್ತಿರುವ ಬಂಡವಾಳಶಾಹಿಗಳಿಗೆ ತಕ್ಕಪಾಠ ಕಲಿಸಲು ಎಲ್ಲಾ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟಕ್ಕೆ ಕೈಜೋಡಿಸಬೇಕು ಸಿಪಿಎಂ ಮುಖಂಡ ಡಾ. ಅನಿಲ್ ಕುಮಾರ್ ತಿಳಿಸಿದರು.

ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಸಿಐಟಿಯು, ಕೂಲಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಸಿಪಿಎಂ ಸೇರಿದಂತೆ ವಿವಿಧ ಸಂಘಟನೆಗಳವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ

ಕಾರ್ಮಿಕರ ಪರವಾಗಿ ಕಾಳಜಿವಹಿಸುವ ಬದಲಿಗೆ ಶ್ರೀಮಂತರ, ಕಾರ್ಪೊರೇಟಗಳ ಪರವಾಗಿ ನಮ್ಮನ್ನಾಳುವ ಸರ್ಕಾರಗಳು ಆಡಳಿತ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಾರ್ಮಿಕರ ಹಕ್ಕುಗಳ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ದುಡಿಯುವ ಕಾರ್ಮಿಕ ವರ್ಗದವರಿಗೆ ಸಿಗಬೇಕಾಗಿರುವ ಹಕ್ಕುಗಳನ್ನು ಕಸಿದುಕೊಂಡ ಪರಿಣಾಮ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ವಿವಿಧ ಸಂಘಟನೆಗಳ ಮೆರವಣಿಗೆ

ಇದಕ್ಕೂ ಮುನ್ನ ಸಿಪಿಎಂ ಪಕ್ಷದ ಕಚೇರಿ ಸುಂದರಯ್ಯ ಭವನದಿಂದ ಕೆಪಿಆರ್‌ಎಸ್. ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಸಿಪಿಐ(ಎಂ) ಮುಖಂಡರಾದ ಚೆನ್ನರಾಯಪ್ಪ, ಎಂ.ಪಿ.ಮುನಿವೆಂಕಟಪ್ಪ, ಮುಸ್ತಾಫ್, ಬಿಳ್ಳೂರು ನಾಗರಾಜ್, ವಾಲ್ಮೀಕಿ ಅಶ್ವಥಪ್ಪ, ಮುನಿಸ್ವಾಮಿ, ಭಾಗ್ಯಮ್ಮ, ವೀಣಮ್ಮ, ವೆಂಕಟರವಣ, ಜಯರಾಮರೆಡ್ಡಿ ಮತ್ತಿತರರು ಇದ್ದರು.