ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವೇತನ ಪಾವತಿ ವಿಳಂಬ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ತಾಲೂಕಿನ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದ ಸರವೀ ಕಾರ್ಖಾನೆ ಕಾರ್ಮಿಕರು ಶನಿವಾರ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಎಂದಿನಂತೆ ಕಾರ್ಖಾನೆ ಕೆಲಸಕ್ಕೆ ಹಾಜರಾದ ನೂರಾರು ಮಹಿಳಾ ಕಾರ್ಮಿಕರು ಮೇ ತಿಂಗಳ ವೇತನ, ಬೋನಸ್ ಹಾಗೂ ಪಿಎಫ್ ಹಣ ಪಾವತಿಸುವಂತೆ ಆಗ್ರಪಡಿಸಿ ಕರ್ತವ್ಯ ಬಹಿಷ್ಕರಿಸಿ ಧರಣಿ ನಡೆಸಿದರು.
ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡದೆ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ. ಇದರಿಂದ ಸಂಸಾರ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಪೋಷಕರ ಆರೋಗ್ಯ ವೆಚ್ಚಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.ನಂತರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಮಾನವ ಸಂಪನ್ಮೂಲ ವ್ಯವಸ್ಥಾಪಕ ಪ್ರದೀಪ್, ಕಾರ್ಖಾನೆಯಲ್ಲಿ ತಯಾರಾದ ವಸ್ತುಗಳನ್ನು ಖರೀದಿಸಿದ ವ್ಯಕ್ತಿಗಳು ಸಕಾಲದಲ್ಲಿ ಹಣಪಾವತಿ ಮಾಡದ ಕಾರಣ ವೇತನ ಪಾವತಿ ವಿಳಂಬವಾಗಿದೆ ಸಂಜೆಯೊಳಗೆ ಕಾರ್ಮಿಕರ ಎಲ್ಲಾ ಖಾತೆಗಳಿಗೂ ಹಣ ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಪಿಎಫ್ ಮತ್ತು ಬೋನಸ್ ಪಾವತಿ ಬಗ್ಗೆ ಕಾರ್ಖಾನೆ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಕಾರ್ಮಿಕರಿಗೆ ಹಂತ ಹಂತವಾಗಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಹೇಳಿದರು.ಅಧಿಕಾರಿಗಳ ಮಾತಿನಿಂದ ತೃಪ್ತರಾಗದ ಕಾರ್ಮಿಕರು ವೇತನ ಪಾವತಿ ಮಾಡುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸಂಜೆ ನಂತರ ಕಾರ್ಖಾನೆ ಆಡಳಿತ ಮಂಡಳಿ ಕಳೆದ ತಿಂಗಳ ವೇತನವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಲಾಯಿತು. ಆದರೂ ಸಹ ಉಳಿದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಮುಂದೆ ಮುಂದುವರೆಸಿದ್ದಾರೆ. ಪ್ರತಿಭಟನೆಯಲ್ಲಿ ಲತಾ, ಅನಿತಾ, ಮಂಗಳ, ಬೇಬಿ, ದೇವರಾಜು, ಗಣೇಶ್,ಚೈತ್ರ, ಪವಿತ್ರ, ಸಿದ್ದಬಸಪ್ಪ, ರಾಜಣ್ಣ ಮತ್ತಿತರು ಭಾಗವಹಿಸಿದ್ದರು.