ಜಿಪಂ ಸಿಇಒ ಕೆ.ಆರ್.ನಂದಿನಿ ವಿರುದ್ಧ ಕೂಲಿಕಾರರ ಪ್ರತಿಭಟನೆ

| Published : Jul 09 2025, 12:18 AM IST

ಸಾರಾಂಶ

ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರ ಬಡ ಕೂಲಿಕಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದಾಗ ಸಿಇಒ ವಿನಾಕಾರಣ ಕಾಯುವಂತೆ ಮಾಡಿ ಸೌಜನ್ಯಕ್ಕೂ ಕೂಲಿಕಾರರ ಅಹವಾಲನ್ನು ಆಲಿಸದೇ ನಿರಾಕರಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಜಿಪಂ ಸಿಇಒ ಕೆ.ಆರ್.ನಂದಿನಿ ನರೇಗಾ ಕೂಲಿಕಾರರ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಸದಸ್ಯರು ಜೂಗನಹಳ್ಳಿ ಹೊರವಲಯದ ನರೇಗಾ ಕೆಲಸದ ಸ್ಥಳದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕೂಲಿಕಾರರ ಸಂಘದ ಹಲಗೂರು ವಲಯ ಸಮಿತಿ ಅಧ್ಯಕ್ಷೆ ಎಸ್.ಪಿ.ಲಕ್ಷ್ಮೀ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರ ಬಡ ಕೂಲಿಕಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದಾಗ ಸಿಇಒ ವಿನಾಕಾರಣ ಕಾಯುವಂತೆ ಮಾಡಿ ಸೌಜನ್ಯಕ್ಕೂ ಕೂಲಿಕಾರರ ಅಹವಾಲನ್ನು ಆಲಿಸದೇ ನಿರಾಕರಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಿಇಒ ಅವರ ಕೂಲಿಕಾರರ ವಿರೋಧಿ ಆಡಳಿತವನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಎಂ.ಪುಟ್ಟಮಾದು ವಿರುದ್ಧ ಜಿಲ್ಲಾದ್ಯಂತ ಕರ್ತವ್ಯ ನಿರ್ವಹಿಸುವ ಪಿಡಿಒಗಳು ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಸಿಇಒ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಕೂಡಲೇ ಸರ್ಕಾರ ಸಿಇಒ ಕೆ.ಆರ್.ನಂದಿನಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಾಂತ ಕೂಲಿಕಾರರ ಸಂಘದ ಕುಂತೂರು ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್, ಸದಸ್ಯರಾದ ದುಂಡಮ್ಮ, ಚಂದ್ರಿಕಾ, ಪ್ರೇಮ, ಮಂಟಯ್ಯ, ಬಸವರಾಜು, ತಾಯಮ್ಮ, ಮಂಗಳಮ್ಮ, ಲಕ್ಷ್ಮಮ್ಮ, ಲತಾ, ಸಾವಿತ್ರಮ್ಮ ಸೇರಿದಂತೆ ನೂರಾರು ಕೂಲಿಕಾರರು ಭಾಗವಹಿಸಿದ್ದರು.