ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರ ಪ್ರತಿಭಟನೆ

| Published : Jun 02 2025, 02:21 AM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪೌರಕಾರ್ಮಿಕರು ದಿಢೀರನೆ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ನಿರ್ದೇಶನದಂತೆ ನಗರದ ಪೌರ ಕಾರ್ಮಿಕರು ದಿಢೀರನೆ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಾತನಾಡಿ, ನೀರು ಸರಬರಾಜು ಹೊರತುಪಡಿಸಿ ಉಳಿದೆಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೂ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.ಹಲವು ದಶಕಗಳಿಂದ ನೌಕರರ ಬೇಡಿಕೆಗಳು ಬಾಕಿ ಉಳಿದಿದ್ದು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ, ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಾತಿಗೊಳಿಸಬೇಕು. ನಗರಸಭೆಗಳಲ್ಲಿ ಶೇ.100 ರಷ್ಟು ಪೌರ ಕಾರ್ಮಿಕರನ್ನು ವಿಶೇಷ ನೇಮಕಾತಿ ಮಾಡಬೇಕು. 2022ನೇ ಸಾಲಿನ ವಿಶೇಷ ನೇಮಕಾತಿಯಡಿ ಆಯ್ಕೆಯಾದ ಪೌರಕಾರ್ಮಿಕರು, ಲೋಡರ್ಸ್‌ಗಳಿಗೆ ಎಸ್.ಎಫ್.ಸಿ ನಿಧಿಯಿಂದ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ, ನಗದು ರಹಿತ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬೇಕು. ನೀರು ಸರಬರಾಜು ನೌಕರರ ವಿಶೇಷ ನೇಮಕಾತಿ, ಐಟಿ ಸಿಬ್ಬಂದಿ, ಅಕೌಂಟ್ ಕನ್ಸಲ್‌ಟೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸಬೇಕೆಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಮುಷ್ಕರ ನಡೆಸಲಾಗುತ್ತಿದೆ ಎಂದ ಅವರು, ಸರ್ಕಾರದಿಂದ ಸ್ಪಂದನೆ ಸಿಗದಿದ್ದಲ್ಲಿ ನೀರು ಪೂರೈಕೆಯನ್ನೂ ಸ್ಥಗಿತಗೊಳಿಸಲಾಗುವುದು ಎಚ್ಚರಿಸಿದರು. ಪೌರ ಸೇವಾ ನೌಕರರ ಸೇವಾ ಸಂಘದ ಪ್ರಮುಖರಾದ ಅಬ್ದುಲ್ ಅಜೀಜ್, ಈರಪ್ಪ ಶೆಟ್ಟಿ, ಅಶೋಕ್ ಆಳ್ವ, ಪಿ.ಬಿ.ಮೋಹನ್, ಎ.ಎಸ್.ನಾಗೇಶ್ ಸೇರಿದಂತೆ ನಗರದ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.