ಸಾರಾಂಶ
ಸವಣೂರು: ಪಟ್ಟಣದ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಕಾರ್ಮಿಕರನ್ನು ವಂಚಿಸಿ, ಅನ್ಯರನ್ನು ನೇಮಕ ಮಾಡಿರುವುದನ್ನು ಖಂಡಿಸಿ, ಮರುನೇಮಕಕ್ಕೆ ಆಗ್ರಹಿಸಿ ಪುರಸಭೆ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.ಮಂಗಳವಾರ ಹಲಗೆ ಬಾರಿಸುವ ಮೂಲಕ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಕಾರ್ಯವೈಖರಿ ಖಂಡಿಸಿ ಮಳೆಯನ್ನು ಲೆಕ್ಕಿಸದೇ ತಡರಾತ್ರಿಯವರೆಗೆ ಪ್ರತಿಭಟನೆ ಕೈಗೊಂಡರು.
ಪುರಸಭೆಯಲ್ಲಿ ಹಲವು ವರ್ಷಗಳ ಕಾಲ ನಮ್ಮನ್ನು ದುಡಿಸಿಕೊಂಡು, ಮುಂಬರುವ ಕೆಲವು ದಿನಗಳಲ್ಲಿ ಮರುನೇಮಕ ಮಾಡಿಕೊಳ್ಳುವ ಭರವಸೆ ನೀಡಿ, ಸಂಬಳವನ್ನು ಸರಿಯಾಗಿ ನೀಡದೆ ವಂಚಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ನಗರದ ನಿವಾಸಿಗಳಾಗಿರುವ ನಾವು ಕೆಲಸವಿಲ್ಲದೇ ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಇದೀಗ ಏಕಾಏಕಿ ಎಸ್.ಡಬ್ಲ್ಯು.ಪಿಗೆ, ಕಾರ್ಮಿಕರಲ್ಲದ ಎಂಟು ಜನರನ್ನು ಅನಧಿಕೃತವಾಗಿ ಆಯ್ಕೆ ಮಾಡಿಕೊಂಡು ದಲಿತ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲನೆ ಮಾಡುತಿದ್ದ ವ್ಯಕ್ತಿಯನ್ನು ಎಸ್.ಡಬ್ಲ್ಯು.ಪಿಗೆ ಮೇಲ್ವಿಚಾರಕನನ್ನಾಗಿ ನೇಮಕ ಮಾಡಿಕೊಂಡಿರುವುದು ಯಾವ ನ್ಯಾಯ? ವಾಟರ್ಮನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರನ್ನಾಗಿ ಯಾವ ಆಧಾರದ ಮೇಲೆ ಹಾಗೂ ಯಾವ ನಿಯಮಾವಳಿ ಅನುಸರಿಸಿ ನಿಯೋಜನೆ ಮಾಡಿದ್ದಿರಿ ಎಂದು ಪ್ರಶ್ನಿಸಿದರು.ಬುಧವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಕೆಲ ಮುಖಂಡರೊಂದಿಗೆ ಸಭೆ ನಡೆಸಿದರು. ಶಾಸಕರು ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಹೊಸಮನಿ, ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಾತರಕಿ, ಮುಖಂಡರಾದ ಲಿಡಕರ ನಿಗಮದ ಉಪಾಧ್ಯಕ್ಷ ಡಿ.ಎಸ್. ಮಾಳಗಿ, ಅಶೋಕ ಮರೆಣ್ಣವರ, ನಾಗರಾಜ ಮಾಳಗಿ, ಲಕ್ಷ್ಮಣ ಕನವಳ್ಳಿ, ಶ್ರೀಕಾಂತ ಲಕ್ಷ್ಮೇಶ್ವರ, ಆನಂದ ವಡಕಮ್ಮನವರ, ಪದಾಧಿಕಾರಿಗಳಾದ ಅನಿಲ ಬಿ.ಸಿ., ಮುತ್ತು ಲಕ್ಷ್ಮೇಶ್ವರ, ರಮೇಶ ಸಿದ್ದಮ್ಮನವರ, ವಿನೋದ ಮರಗಣ್ಣವರ, ಕೃಷ್ಣಪ್ಪ ಮೈಲೆಮ್ಮನವರ, ಮಂಜುನಾಥ ಲಕ್ಷ್ಮೇಶ್ವರ, ಮೋಹನ್ ಲಕ್ಷ್ಮೇಶ್ವರ, ಮೈಲಾರಿ ಮರಗಪ್ಪನವರ, ವಿರುಪಾಕ್ಷಪ್ಪ ಕೆಂಚಣ್ಣವರ, ದ್ಯಾಮಣ್ಣ ಕಟ್ಟಿ, ಕಾಶಿನಾಥ ಪೂಜಾರ, ಗಣೇಶ ಮರಣ್ಣವರ, ಸದಾನಂದ ಮೈಲಮ್ಮನವರ, ಮಂಜು ಮೈಲಮ್ಮನವರ, ಉಮೇಶ ಹುಲ್ಲಮ್ಮನವರ, ಶಿವಕುಮಾರ ಕೆಂಚಣ್ಣವರ, ಹನುಮಂತಪ್ಪ ಮಂತ್ರೋಡಿ, ಲಕ್ಷ್ಮಣ ಕಳ್ಳಿಮನಿ, ಭೀಮಣ್ಣ ಮೆಳೆಣ್ಣವರ, ಹುಚ್ಚಪ್ಪ ಗುರಣ್ಣವರ, ಬಸಪ್ಪ ಧಾರವಾಡ ಹಾಗೂ ಇತರರು ಇದ್ದರು.