ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಅರಿವು ಮೂಡಿಸಬೇಕು: ನ್ಯಾ. ಹನುಮಂತಪ್ಪ

| Published : Sep 23 2024, 01:28 AM IST

ಸಾರಾಂಶ

ಚಿಕ್ಕಮಗಳೂರು, ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸರ್ಕಾರದ ಯೋಜನೆ ಹಾಗೂ ಕಾನೂನಾತ್ಮಕ ಸಾಮಾಜಿಕ ಭದ್ರತೆಗಳ ಕುರಿತು ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸರ್ಕಾರದ ಯೋಜನೆ ಹಾಗೂ ಕಾನೂನಾತ್ಮಕ ಸಾಮಾಜಿಕ ಭದ್ರತೆಗಳ ಕುರಿತು ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಟಿಎಂಎಸ್ ಶಾಲಾ ಆವರಣದ ರೋಟರಿ ಸಭಾಂಗಣದಲ್ಲಿ ಜಿಲ್ಲೆಯ ಉದ್ಯೋಗದಾತರು, ಗುತ್ತಿಗೆದಾರರು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ದರು.

ದೇಶದ ಅಭಿವೃದ್ಧಿಗೆ ಕಾರ್ಮಿಕರ ಪಾತ್ರ ಮಹತ್ವದ್ದು, ಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ರಕ್ಷಣೆ ಹಾಗೂ ಸಹಾಯ ನೀಡಿದಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಕಾರ್ಮಿಕರಿಗೆ ಹೆಣ್ಣು, ಗಂಡು ಎಂಬ ಭೇದ ಭಾವವಿಲ್ಲದೆ ಸಮಾನ ವೇತನ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ವೈದ್ಯಕೀಯ ಸೌಲಭ್ಯ, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಒದಗಿಸಬೇಕು. ಯಾವುದೇ ಎಸ್ಟೇಟ್ ಹೋಟೆಲ್ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಳ್ಳ ಬಾರದು. ಬಾಲ ಕಾರ್ಮಿಕರನ್ನು ಅಪಾಯಕಾರಿ ಕೆಲಸಗಳಲ್ಲಿ ಬಳಸಿಕೊಂಡವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ಎಸ್ಟೇಟ್, ಹೋಟೆಲ್, ಕಾರ್ಖಾನೆ ಹಾಗೂ ಇತರೆ ಉದ್ದಿಮೆಗಳ ಮಾಲೀಕರು ಇತರ ಜಿಲ್ಲೆ ರಾಜ್ಯಗಳಿಂದ ಉದ್ಯೋಗ ಅರಸಿ ವಲಸೆ ಬರುವ ಕಾರ್ಮಿಕರ ಮಾಹಿತಿ ಕಲೆ ಹಾಕಿ ಅವರ ವಿಳಾಸ ತಿಳಿದು ನಂತರ ಅವರಿಗೆ ಕೆಲಸ ಕೊಡಬೇಕು. ಮಾಲೀಕರು ಯಾವುದೇ ಮಧ್ಯವರ್ತಿಗಳ ಸಹಾಯದಿಂದ ಕಾರ್ಮಿಕರನ್ನು ದುಡಿಸಿ ಕೊಂಡು ಕೆಲಸ ಮಾಡುವ ಸ್ಥಳಗಳಲ್ಲಿ ಆಗುವ ಅಪಘಾತ ಅವಘಡಗಳಿಗೆ ಬಲಿಯಾಗದೆ ಕಾರ್ಮಿಕರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಾರ್ಮಿಕರ ಪೂರ್ಣ ಮಾಹಿತಿ ಪಡೆದು ಕಾನೂನಾತ್ಮಕ ಕ್ರಮಗಳಿಂದ ಕಾರ್ಮಿಕರೊಂದಿಗೆ ವರ್ತಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್. ರವಿಕುಮಾರ್ ಮಾತನಾಡಿ, ಸ್ವತಂತ್ರ ಪೂರ್ವ ದಿಂದಲೂ ಕಾರ್ಮಿಕರ ಪರ ಹಲವಾರು ಕಾನೂನುಗಳನ್ನು ನಾವು ಗಮನಿಸಬಹುದು ಕನಿಷ್ಠ ವೇತನ, ವೈದ್ಯಕೀಯ ಸೌಲಭ್ಯ ಸೇರಿದಂತೆ ಅನೇಕ ಕಾನೂನಾತ್ಮಕ ಸೇವೆ ನೀಡಲಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ ಹಲವಾರು ಯೋಜನೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿದ್ದು, ಸಂಘಟಿತ ಆಗುವ ಅಸಂಘಟಿತ ಕಾರ್ಮಿಕರಿಗೆ ತಾಲೂಕು ಮಟ್ಟಗಳಲ್ಲಿ ಕಾರ್ಯಾಗಾರ ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಕಾರ್ಮಿಕರ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಉದ್ದೇಶ ಕಾರ್ಮಿಕರು ಇದರ ಸೌಲಭ್ಯಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ಪ್ರಧಾನ ಕಾನೂನು ನೆರವು ಅಭಿಕ್ಷಕ ನಟರಾಜ್, ವಕೀಲ ಸಂಘದ ಉಪಾಧ್ಯಕ್ಷ ಶರತ್ ಚಂದ್ರ ಇದ್ದರು. 22 ಕೆಸಿಕೆಎಂ 6ಚಿಕ್ಕಮಗಳೂರಿನ ಟಿಎಂಎಸ್ ಶಾಲೆ ಆವರಣದ ರೋಟರಿ ಸಭಾಂಗಣದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ನ್ಯಾ. ಹನುಮಂತಪ್ಪ ಅವರು ಉದ್ಘಾಟಿಸಿದರು.