ಸಾರಾಂಶ
ರಾಜ್ಯದ ಲಕ್ಷಾಂತರ ಅಸಂಘಟಿತ ನಿರ್ಮಾಣ ಕಾರ್ಮಿಕರ ಹಕ್ಕುಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ.
ಹುಬ್ಬಳ್ಳಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಿ ಕಟ್ಟಡ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿ ಸೋಮವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಅಹೋರಾತ್ರಿ ಧರಣಿ ಆರಂಭಿಸಿತು.
ಈ ವೇಳೆ ಬಿಜೆಪಿ ಯುವ ಮುಖಂಡ ವೆಂಕಟೇಶ್ ಕಾಟವೆ ಮಾತನಾಡಿ, ರಾಜ್ಯದ ಲಕ್ಷಾಂತರ ಅಸಂಘಟಿತ ನಿರ್ಮಾಣ ಕಾರ್ಮಿಕರ ಹಕ್ಕುಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ. ಕಾರ್ಮಿಕ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು, ಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡಬೇಕು, ಸರ್ಕಾರಿ ಯೋಜನೆಗಳ ಲಾಭಗಳು ನೇರವಾಗಿ ಕಾರ್ಮಿಕರಿಗೆ ತಲುಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಿದರು. ಅಲ್ಲದೆ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ದೊರಕಿಸುವ ಸಲುವಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಾಕಿ ಶೈಕ್ಷಣಿಕ ಧನಸಹಾಯ, ಹೊಸ ನೋಂದಣಿ ಹಾಗೂ ನವೀಕರಣವನ್ನು ಒಂದು ವರ್ಷದ ಬದಲಾಗಿ ಈ ಮೊದಲಿನಂತೆ ಮೂರು ವರ್ಷಗಳಿಗೆ ಸೀಮಿತಗೊಳಿಸುವುದು, ನಗದುರಹಿತ ಚಿಕಿತ್ಸೆ ಯೋಜನೆ ಜಾರಿ, ಕಿಟ್ ವಿತರಣೆ ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಸೇರಿ ಇತರ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಇದೇ ವೇಳೆ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಕಾರ್ಮಿಕ ಭವನದ ವರೆಗೆ ಪಾದಯಾತ್ರೆ ನಡೆಸಿದ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದರು.ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಹೋರಾಟ ಹಿಂಪಡೆಯಲು ಮನವೊಲಿಸುವ ಯತ್ನ ನಡೆಸಿದರು. ಇದಕ್ಕೊಪ್ಪದ ಕಾರ್ಮಿಕರು ಧರಣಿ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಪಿ. ಕರಿಸೋಮನಗೌಡ್ರ, ಶಿವಕುಮಾರ ಆರ್. ಬಂಡಿವಡ್ಡರ, ನಜರಸೂಲ ಮ. ನದಾಫ, ವಾಸು ಲಮಾಣಿ, ದುರಗಪ್ಪ ಚಿಕ್ಕತುಂಬಳ ಮತ್ತಿತರರಿದ್ದರು.