ಕಲ್ಯಾಣ ಮಂಡಳಿಯ ನಿಧಿಯು ಕಟ್ಟಡ ಕಾರ್ಮಿಕರ ಸ್ವತ್ತಾಗಿದ್ದು, ಅದನ್ನು ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ನಿವೃತ್ತಿ ಜೀವನದ ರಕ್ಷಣೆಗಾಗಿ ಮಾತ್ರ ಬಳಸಬೇಕು

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ಎಐಯುಟಿಯುಸಿ) ನೇತೃತ್ವದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಜರುಗಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎ. ದೇವದಾಸ್, ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಬಳಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಕಲ್ಯಾಣ ಮಂಡಳಿಯ ನಿಧಿಯು ಕಟ್ಟಡ ಕಾರ್ಮಿಕರ ಸ್ವತ್ತಾಗಿದ್ದು, ಅದನ್ನು ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ನಿವೃತ್ತಿ ಜೀವನದ ರಕ್ಷಣೆಗಾಗಿ ಮಾತ್ರ ಬಳಸಬೇಕು ಎಂದು ಆಗ್ರಹಿಸಿದರು.

ಮೇಸನ್ ಕಿಟ್, ಸೇಫ್ಟಿ ಕಿಟ್, ಶೈಕ್ಷಣಿಕ ಕಿಟ್ ಸೇರಿದಂತೆ ವಿವಿಧ ಹೆಸರಿನಲ್ಲಿ ಕಿಟ್‌ ವಿತರಿಸುವ ಬದಲು ಆ ಹಣ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. 2021ರ ಆದೇಶದಂತೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಯೋಜನೆ ಪುನಃ ಜಾರಿಗೊಳಿಸಬೇಕು. ನೋಂದಾಯಿತ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ರಾಜ್ಯಾದ್ಯಂತ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. 60 ವರ್ಷ ತುಂಬಿದ ನಂತರ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಧಿಗೆ ವಿಧಿಸಿರುವ ನಿರ್ಬಂಧ ರದ್ದುಪಡಿಸಿ ಎಲ್ಲ ಅರ್ಹ ಕಾರ್ಮಿಕರಿಗೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರ ಸಭೆ ನಡೆಸಿ ಅವರ ಸಮಸ್ಯೆ ಸಂಗ್ರಹಿಸಲಾಗಿದೆ.

ಈಗಾಗಲೇ ಮಂಜೂರಾದ ವಿವಿಧ ಯೋಜನೆ ಹಣ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಬಾಕಿ ಉಳಿದಿರುವ ಅರ್ಜಿ ಶೀಘ್ರ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಘೋಷಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ, ಧರಣಿ, ಪ್ರತಿಭಟನೆ ಹಾಗೂ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ಬಳಿಕ ತಾಲೂಕು ಕಾರ್ಮಿಕ ಅಧಿಕಾರಿ ಮಂಜುಳಾ ಮೂಲಕ ರಾಜ್ಯ ಕಟ್ಟಡ ಇತರ ನಿರ್ಮಾಣ ಕಾರ್ಮಿಕ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಮುಖಂಡ ಸುರೇಶ ದಳಪತಿ, ಕುಮಾರ್ ಡಿ., ನಾಗರಾಜ್ ಹುಲಗಿ, ಶಬ್ಬೀರ್ ಕುಲುಮಿ, ಚಂದ್ರಶೇಖರ, ಮೊದಿನ್, ಯಲ್ಲನಗೌಡ, ಯಮನೂರ, ಮುರ್ತೆಪ್ಪ, ಬಾಬು, ಶರಣಪ್ಪ, ಯಲ್ಲಪ್ಪ, ಶರೀಫ್, ಕಟ್ಟೆಪ್ಪ, ಅಂಬಣ್ಣ, ಮುಬೀನ್, ಶಂಕರ, ಗಂಗಮ್ಮ, ಹನುಮವ್ವ ನೂರಾರು ಕಟ್ಟಡ ಕಾರ್ಮಿಕರಿದ್ದರು.