ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ವಿಶ್ವ ಕಾರ್ಮಿಕರ ದಿನವನ್ನು ತಾಲೂಕಿನ ಬನ್ನಿಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬ್ಯಾಡಗಿ: ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ವಿಶ್ವ ಕಾರ್ಮಿಕರ ದಿನವನ್ನು ತಾಲೂಕಿನ ಬನ್ನಿಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ, ಕಾರ್ಮಿಕರಿಲ್ಲದೆ ದೇಶದ ಪ್ರಗತಿಯನ್ನು ಊಹಿಸಲು ಸಾಧ್ಯವಿಲ್ಲ, ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿರುತ್ತದೆ. ಅವರಿಲ್ಲದೇ ಯಾವುದೇ ದೇಶ ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾದ್ಯವಿಲ್ಲ ಎಂದರು. ನರೇಗಾ ಯೋಜನೆಯಡಿ ಕಾಮಗಾರಿಗಳಿಗೆ ಎನ್‌ಎಂಎಂಎಸ್ ಹಾಜರಾತಿ ವ್ಯವಸ್ಥೆ ಅಳವಡಿಸಲಾಗಿದ್ದು, ಪ್ರತಿಯೊಬ್ಬ ಕೂಲಿ ಕಾರ್ಮಿಕರು ತಮ್ಮ ವೈಯಕ್ತಿಕ ಫೋಟೋ ತೆಗೆಸಿಕೊಳ್ಳುವುದು ಕಡ್ಡಾಯವಾಗಿದೆ, ಇದರಿಂದ ವೇತನದ ಸಮಸ್ಯೆ ಎದುರಾಗುವುದಿಲ್ಲ ಎಂದರಲ್ಲದೇ, ಗ್ರಾಮದಲ್ಲೇ ಉದ್ಯೋಗ ನೀಡುವ ಮೂಲಕ ಕೂಲಿಕಾರರು ಬೇರೆಡೆ ಗುಳೆ ಹೋಗುವುದನ್ನು ತಡೆಗಟ್ಟಲಾಗುತ್ತಿದೆ. ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆಯಬೇಕು, ಬೇಸಿಗೆ ಇರುವುದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಾಕಷ್ಟು ನೀರು ಕುಡಿಯುವಂತೆ ಸಲಹೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಿಡಿಒ ವಿದ್ಯಾವತಿ, ಸಹಾಯಕ ನಿರ್ದೇಶಕ ಎಂ.ಎ. ಅಗಸರ, ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಎಸ್.ಡಿ. ಬಳಿಗಾರ, ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷೆ ಗುತ್ತೆಮ್ಮ ಸುಣಗಾರ, ಉಪಾಧ್ಯಕ್ಷೆ ನಾಗಮ್ಮ ಮಲ್ಲಳ್ಳಿ, ನಾಗರಾಜ ಬಿದರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.