ದಿಲ್ಲಿಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ: ರಾಧಾಕೃಷ್ಣ ದೊಡ್ಡಮನಿ

| Published : Apr 21 2024, 02:22 AM IST

ದಿಲ್ಲಿಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ: ರಾಧಾಕೃಷ್ಣ ದೊಡ್ಡಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅಭ್ಯರ್ಥಿ ಆರಿಸಿ‌ ಕಳಿಸಿದ್ದೀರಿ ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಹಾಗಾಗಿ ಈ ಸಲ‌‌ ನನ್ನನ್ನು ಆರಿಸಿ ಕಳಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ಅಭ್ಯರ್ಥಿ ಆರಿಸಿ‌ ಕಳಿಸಿದ್ದೀರಿ ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಹಾಗಾಗಿ ಈ ಸಲ‌‌ ನನ್ನನ್ನು ಆರಿಸಿ ಕಳಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ನಗರದ ನೀಲಾಂಬಿಕ ಕಲ್ಯಾಣ ಮಂಟಪದಲ್ಲಿ ನಡೆದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.51,52 ಹಾಗೂ 55ರ ಕಾರ್ಯಕರ್ತರ ಹಾಗೂ ಮತದಾರರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ನಾನು ನಿಮ್ಮೆಲ್ಲರ ಧ್ವನಿಯಾಗಿ ದಿಲ್ಲಿಯಲ್ಲಿ ಕೆಲಸ ಮಾಡಲಿದ್ದೇನೆ. ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಇದ್ದಾರೆ. ನಮ್ಮೊಂದಿಗೆ ರಾಜ್ಯದಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಶಾಸಕರಾದ‌ ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್ ಇರುತ್ತಾರೆ. ಎಲ್ಲರೂ ಸೇರಿ ಜಿಲ್ಲೆ ಅಭಿವೃದ್ಧಿ ಮಾಡುತ್ತೇವೆ. ಯಾಕೆಂದರೆ ಇದು ನನ್ನ ಹಾಗೂ ಬಿಜೆಪಿ ನಡುವಿನ ಚುನಾವಣೆಯಲ್ಲ ಬದಲಿಗೆ ಜಿಲ್ಲೆ ಅಭಿವೃದ್ಧಿ ನಿರ್ಧರಿಸುವ ಚುನಾವಣೆಯಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಾಧವ ವಿರುದ್ಧ ಬಿಜೆಪಿ ಪಕ್ಷದವರೇ ಗೋಬ್ಯಾಕ್ ಅಭಿಯಾನ ಪ್ರಾರಂಭಿಸಿದ್ದಾರೆ.‌ ಕಾರಣ ಕಳೆದ‌ ಐದು ವರ್ಷದಲ್ಲಿ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಾಗಾಗಿ ಜನರು ಸಂಸದರಾಗಿ ನೀವು ಮಾಡಿದ ಕೆಲಸದ ಲೆಕ್ಕ ಕೊಡಿ ಎಂದು ಹೇಳುತ್ತಿದ್ದಾರೆ. ಜಾಧವ ಬಳಿ ಉತ್ತರ ಇಲ್ಲದ್ದರಿಂದ ಅವರ ವಿರುದ್ಧ ಗೋಬ್ಯಾಕ್ ಅಭಿಯಾನ ನಡೆಯುತ್ತಿದೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಉಮೇಶ್ ಜಾಧವ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಖರ್ಗೆ ಸಾಹೇಬರು ಮಂಜೂರು ಮಾಡಿಸಿದ ಯೋಜನೆಗಳನ್ನೇ ಅನುಷ್ಠಾನಗೊಳಿಸಲಿಲ್ಲ ಎಂದರು.

ಪಂಚ ಗ್ಯಾರಂಟಿಗಳು ಜಾರಿಗೆ ಬಂದ ನಂತರ ಜನರು‌ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಬಿಜೆಪಿಯವರು ಮಾತು ತಪ್ಪಿದ್ದಾರೆ‌. ಜನರು ಕಷ್ಟದಲ್ಲಿ ಇದ್ದಾಗ ಸಹಾಯಕ್ಕೆ ಬರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಎಲ್ಲ ರೀತಿಯ ಸಹಾಯ ಮಾಡಿದ್ದಾರೆ ಎಂದು ನೆನಪಿಸಿಕೊಂಡು, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಅವರಿಗೆ ನಮನ‌ ಸಲ್ಲಿಸಲು ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಆಮ್ ಆದ್ಮಿ ಪಕ್ಷ ಹಾಗೂ ಜೆಡಿಎಸ್ ಪಕ್ಷದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ವೇದಿಕೆ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಎಂ‌ಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಮಜರ್ ಖಾನ್, ಮಾಜಿ ಎಂ‌ಎಲ್‌ಸಿ ಶರಣಪ್ಪ ಮಟ್ಟೂರು, ಬಸವರಾಜ ಭೀಮಳ್ಳಿ, ರಾಜಗೋಪಾಲರೆಡ್ಡಿ, ನೀಲಕಂಠರಾವ್ ಮೂಲಗೆ, ಪ್ರವೀಣ್ ಹರವಾಳ, ಡಾ ಕಿರಣ್ ದೇಶಮುಖ್, ಚಂದ್ರಿಕಾ‌ಪರಮೇಶ್ವರಿ,‌ ಶಿವಕುಮಾರ ಹೊನಗುಂಟಿ‌ ಇದ್ದರು.