ಸಾರಾಂಶ
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಸಾಮ್ಯಾಜ್ಯಶಾಹಿ ಶಕ್ತಿಗಳು ಹಾಗೂ ಬಂಡವಾಳಶಾಹಿ ವರ್ಗದ ಜೀವ ವಿರೋಧಿ ನಿಲುವುಗಳ ವಿರುದ್ಧ ದುಡಿಯುವ ಜನತೆ ಒಂದಾಗಿ ಪ್ರಬಲ ಪ್ರತಿರೋಧ ಒಡ್ಡಬೇಕಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ಧವಾಗಬೇಕು. ದೇಶದ ಸ್ವಾತಂತ್ರ್ಯ, ಸಮಗ್ರತೆ ಸಾರ್ವಭೌಮತ್ವಕ್ಕೆ ಅಪಾಯ ತಂದೊಡ್ಡುವ ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟದಿಂದ ದೇಶವನ್ನು ಮುಕ್ತಗೊಳಿಸಬೇಕಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಉಳ್ಳಾಲ ಜಂಕ್ಷನ್‌ನಲ್ಲಿ ಜರುಗಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಸಂಹಿತೆಗಳನ್ನಾಗಿ ರೂಪಿಸುವ ಮೂಲಕ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುವ ಹುನ್ನಾರ ನಡೆಸುತ್ತಿದೆ. ಮತ್ತೊಂದೆಡೆ ದೇಶದ ಐಕ್ಯತೆಯನ್ನು ಮುರಿದು ಜಾತಿ, ಧರ್ಮದ ಹೆಸರಿನಲ್ಲಿ ಕಾರ್ಮಿಕ ವರ್ಗವನ್ನು ಒಡೆಯುವ ಪಿತೂರಿ ನಡೆಸುತ್ತಿದೆ ಎಂದವರು ಆರೋಪಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಸಾಮ್ಯಾಜ್ಯಶಾಹಿ ಶಕ್ತಿಗಳು ಹಾಗೂ ಬಂಡವಾಳಶಾಹಿ ವರ್ಗದ ಜೀವ ವಿರೋಧಿ ನಿಲುವುಗಳ ವಿರುದ್ಧ ದುಡಿಯುವ ಜನತೆ ಒಂದಾಗಿ ಪ್ರಬಲ ಪ್ರತಿರೋಧ ಒಡ್ಡಬೇಕಾಗಿದೆ ಎಂದು ಹೇಳಿದರು.ಸಿಐಟಿಯು ಜಿಲ್ಲಾ ನಾಯಕ ಜಯಂತ ನಾಯಕ್, ರೈತ ಸಂಘಟನೆಯ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್ ಮಾತನಾಡಿದರು.
ಸಿಐಟಿಯು ಉಳ್ಳಾಲ ತಾಲೂಕು ಅಧ್ಯಕ್ಷ ಸುಂದರ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪದ್ಮಾವತಿ ಶೆಟ್ಟಿ, ಜನಾರ್ದನ ಕುತ್ತಾರ್, ರೋಹಿದಾಸ್ ಭಟ್ನಗರ, ವಿಲಾಸಿನಿ ತೊಕ್ಕೋಟು, ರತ್ನಮಾಲಾ, ಚಂದ್ರಹಾಸ ಪಿಲಾರ್ ಇದ್ದರು.