ಕಾಮಗಾರಿಗಳು ಮಳೆಗಾಲದೊಳಗೆ ಪೂರ್ಣಗೊಳ್ಳಬೇಕು: ಡಾ.ಮಂತರ್ ಗೌಡ

| Published : Feb 14 2025, 12:33 AM IST

ಕಾಮಗಾರಿಗಳು ಮಳೆಗಾಲದೊಳಗೆ ಪೂರ್ಣಗೊಳ್ಳಬೇಕು: ಡಾ.ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ತಾಲೂಕಿನಲ್ಲಿ 90 ಕೋಟಿ ರು. ಗಳ ಅನುದಾನದ ಕಾಮಗಾರಿಗಳು ಮಳೆಗಾಲದೊಳಗೆ ಪೂರ್ಣಗೊಳ್ಳಬೇಕು ಎಂದು ಶಾಸಕ ಡಾ. ಮಂತರ್‌ ಗೌಡ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ತಾಲೂಕಿನಲ್ಲಿ 90 ಕೋಟಿ ರು. ಗಳ ಅನುದಾನದ ಕಾಮಗಾರಿಗಳು ಮಳೆಗಾಲದೊಳಗೆ ಪೂರ್ಣಗೊಳ್ಳಬೇಕು. ಆದರೆ ಲೋಕೋಪಯೋಗಿ ಇಲಾಖೆಯ ಕಾಮಗಾರಿ ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ತರುತ್ತಿಲ್ಲ ಎಂದು ಶಾಸಕ ಡಾ.ಮಂತರ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆ ತಾಲೂಕಿನಲ್ಲಿ ವೈಫಲ್ಯಗೊಂಡಿದೆ. ಅಧಿಕಾರಿಗಳು ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಬಹುದು ಎಂದು ಖಡಕ್ಕಾಗಿ ಸೂಚನೆ ನೀಡಿದರು. ಹೀಗಾದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದು ಹೇಗೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

20 ಕೋಟಿ ರು. ಗಳ ವೆಚ್ಚದ ತೋಳೂರುಶೆಟ್ಟಳ್ಳಿ, ಕೂತಿ ಮಾರ್ಗದ ರಸ್ತೆ ಮಾರ್ಗದ ಕಾಮಗಾರಿ ಆಮೆಗತಿಯ ವೇಗದಲ್ಲಿ ಸಾಗುತ್ತಿದೆ. 10 ಕೋಟಿ ರು. ಗಳ ವೆಚ್ಚದ ಐಗೂರಿನ ಕಬ್ಬಿಣ ಸೇತುವೆ ಕಾಮಗಾರಿಯನ್ನು ಈವರೆಗೆ ಗುತ್ತಿಗೆದಾರರು ಆರಂಭಿಸಿಲ್ಲ. ಮುಂದಿನ ಒಂದು ವಾರದೊಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

15 ಕೋಟಿ ರು. ಗಳ ವೆಚ್ಚದ ಅರೆಯೂರು ಹೊಸಳ್ಳಿ, ಸೀಗೆಹೊಸೂರು ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ಮಳೆಗಾಲ ಪ್ರಾರಂಭವಾಗುವ ಮೊದಲು 90 ಕೋಟಿ ರು. ಗಳ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯ ಹೆದ್ದಾರಿ ಬದಿ ಕಾಡು ಕಡಿಯುವುದು, ಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲಿ ಬಹುತೇಕ ಮೋಸ ನಡೆಯುತ್ತಿದೆ. ಕಾಮಗಾರಿ ಕಳಪೆಯಾಗುತ್ತಿದೆ. ಅಲ್ಪಸ್ವಲ್ಪ ಕಾಡನ್ನು ಕಡಿಯಲಾಗುತ್ತಿದೆ. ಗುಣಮಟ್ಟವಲ್ಲದ ಜೆಲ್ಲಿ ಹಾಗು ತಾರನ್ನು ಸುರಿಯುತ್ತಿದ್ದಾರೆ ಎಂದು ಸರ್ಕಾರದ ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಜಿ.ಎಂ.ಕಾಂತರಾಜು, ಸದಸ್ಯರಾದ ಸಬಿತಾ ಚನ್ನಕೇಶವ, ವೇದಕುಮಾರ್, ಸೂಡ ಅಧ್ಯಕ್ಷ ಕೆ.ಎ.ಆದಂ ಆರೋಪಿಸಿದರು.

ಶೇ.30ರಷ್ಟು ಬಿಲೊ ಹಾಕಿ ಟೆಂಡರ್ ಪಡೆಯುವ ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಇಂಜಿನಿಯರ್‌ಗಳು ಶಾಮೀಲಾಗದೆ ಕರ್ತವ್ಯ ನಿರ್ವಹಿಸಿದರೆ, ಬಿಲೊ ಹಾಕಿ ಯಾರು ಟೆಂಡರ್ ಪಡೆಯಲು ಸಾಧ್ಯವಿಲ್ಲ. ಕಂಪನಿ ಎಸ್ಟೇಟ್ ಅವರ ತೋಟ ಎರಡು ಬದಿಯಲ್ಲಿ ಅವರು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಅದನ್ನು ಸೇರಿಸಿಯೇ ಬಿಲ್ ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕರು ಹೇಳಿದರು. ಮುಂದೆ ಹೀಗಾದರೆ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು ಎಂದು ಎಇಇ ಅವರಿಗೆ ಎಚ್ಚರಿಸಿದರು.

ಕೂಡಲೆ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಆದೇಶ ನೀಡಲಾಗುವುದು. ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ ನಾಯಕ್ ಹೇಳಿದರು.

160 ಅಂಗನವಾಡಿಯಲ್ಲಿ 9 ಸಾವಿರ ಮಕ್ಕಳು!: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಸಂಬಂಧಪಟ್ಟಂತೆ 160 ಅಂಗನವಾಡಿಗಳಿದ್ದು, 9 ಸಾವಿರ ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು. ಕೆಲ ಅಂಗನವಾಡಿಗಳಲ್ಲಿ ಮಕ್ಕಳೆ ಇರುವುದಿಲ್ಲ. ಅಲ್ಲಿನ ಶಿಕ್ಷಕರು ಕೂಡ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಲಾ ಮೂರು ದಿನಗಳಲ್ಲಿ ಒಬ್ಬೊಬ್ಬರು ಕಾಫಿ ಕೊಯ್ಯಲು ಹೋಗುತ್ತಾರೆ ಎಂದು ಸಬಿತಾ ಚನ್ನಕೇಶವ ಆರೋಪಿಸಿದರು. ಬಡವರಿಗೆ ಸಿಗಬೇಕಾದ ಪೌಷ್ಟಿಕ ಆಹಾರಗಳು ಯಾರ‍್ಯಾರದೋ ಮನೆಗಳನ್ನು ಸೇರುತ್ತಿವೆ ಎಂದು ದೂರಿದರು.

160 ಅಂಗನವಾಡಿಯಲ್ಲಿ 9 ಸಾವಿರ ಮಕ್ಕಳು ಇರುವುದು ಸಾಧ್ಯವೇ ಇಲ್ಲ. ಇದು ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಒಂದು ಅಂಗನವಾಡಿಯಲ್ಲಿ 56 ಮಕ್ಕಳು ಎಲ್ಲಿಯೂ ಇಲ್ಲ. ಹೆಚ್ಚೆಂದರೆ 5-10 ಮಕ್ಕಳು ಇರಬಹುದು. ಹೆಚ್ಚು ಮಕ್ಕಳನ್ನು ತೋರಿಸಿ ಇಲಾಖೆ ಸರ್ಕಾರ ಮೋಸ ಮಾಡುತ್ತಿದೆ. ಪ್ರತಿ ಅಂಗನವಾಡಿಯಲ್ಲಿರುವ ಮಕ್ಕಳ ಪಕ್ಕಾ ಲೆಕ್ಕವನ್ನು ಕೂಡಲೆ ಸಲ್ಲಿಸಬೇಕು ಎಂದು ಶಾಸಕರು ಅಧಿಕಾರಿಗೆ ತಾಕೀತು ಮಾಡಿದರು.

ದುಂಡಳ್ಳಿ, ಯಸಳೂರು ಮಾರ್ಗದ ರಸ್ತೆ ಕಾಮಗಾರಿ ಪೂರೈಸಲು ಅರಣ್ಯ ಇಲಾಖೆ ಸಹಕಾರ ನೀಡಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಕೊಡಬೇಕು ಎಂದು ಎಸಿಎಫ್ ಗೋಪಾಲ್ ಅವರಿಗೆ ಶಾಸಕರು ಸೂಚಿಸಿದರು.

ತಾಲೂಕಿನ ಗಿರಿಜನರ ಹಾಡಿಯಲ್ಲಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಿದ್ದ 130 ಮಂದಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. 6 ಅರ್ಜಿಗಳು ಬಾಕಿಯಾಗಿವೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಹೇಳಿದರು. ಕೆಲ ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯದಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಇಲಾಖಾಧಿಕಾರಿಗಳಿಗೂ ಹೆದರುತ್ತಿಲ್ಲ ಎಂದು ವೇದಕುಮಾರ್ ದೂರಿದರು.

ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ದುರಸ್ತಿಗಾಗಿ 6000 ಫೈಲ್ಗಳಿವೆ. ಅವುಗಳು ವಿಲೇವಾರಿಯಾಗಬೇಕಾದರೆ ಎರಡೂವರೆ ವರ್ಷಗಳು ಬೇಕಾಗಬಹುದು. 735 ಫೈಲ್‌ಗಳು ದುರಸ್ತಿಯಾಗಿವೆ. ಕಳೆದ ಒಂದು ತಿಂಗಳಲ್ಲಿ 200 ಫೈಲ್‌ಗಳನ್ನು ಎಡಿಎಲ್‌ಆರ್‌ಗೆ ಕಳುಹಿಸಿದ್ದೇನೆ ಎಂದು ತಹಸೀಲ್ದಾರ್ ಕೃಷ್ಣಮೂರ್ತಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಹೇಳಿದರು.