ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ 48 ಕ್ಕೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ.ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್ ಅಂತ್ಯದವರೆಗೆ ನಾಯಿ ಕಡಿತ 4015 ಪ್ರಕರಣಗಳು, ಹಾವು ಕಡಿತ 307 ಪ್ರಕರಣಗಳು, ಭೇದಿ 2292 ಪ್ರಕರಣಗಳು, ಟೈಫಾಯಿಡ್ 846 ಪ್ರಕರಗಣಗಳು, ಡೆಂಘೀ 274 ಪ್ರಕರಣಗಳು, ಕಾಲರಾ 3 ಪ್ರಕರಣ, ಮಲೇರಿಯಾ 3, ಇಲಿಜ್ವರ 13 ಪ್ರಕರಣಗಳು ವರದಿಯಾಗಿದ್ದು, ಯಾವುದೇ ರೀತಿಯ ಸಾವು ಸಂಭವಿಸಿಲ್ಲ ಎಂದು ತಿಳಿಸಿದರು.ಡಿಸೆಂಬರ್‌ನಲ್ಲಿ ಓರ್ವ ತಾಯಿ ಮರಣ:
ಜಿಲ್ಲೆಯಲ್ಲಿ ನವೆಂಬರ್ ಅಂತ್ಯದ ವರೆಗೆ ತಾಯಿ ಮರಣ ಸಂಭವಿಸಿಲ್ಲ. ಆದರೆ ಡಿಸೆಂಬರ್ ತಿಂಗಳಲ್ಲಿ ಒಬ್ಬ ತಾಯಿ ಮರಣ ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮುಕ್ತಗೊಳಿಸುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಏಪ್ರಿಲ್‌ನಿಂದ ನವೆಂಬರ್ ವರೆಗೆ 53 ಶಾಲೆಗಳಲ್ಲಿ, 30 ಕಾಲೇಜುಗಳಲ್ಲಿ ತಂಬಾಕು ಸಂಬಂಧ ಜಾಗೃತಿ ಮೂಡಿಸಲಾಗಿದೆ ಎಂದರು.
ಕೋವಿಡ್ ಸಂದರ್ಭ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧಿಸಿದಂತೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತೀ ಮುಖ್ಯ. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈಜೋಡಿಸಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಸಹಕರಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ಆಶಯದಂತೆ ‘ಎಲ್ಲೆಡೆ ಆರೋಗ್ಯ, ಎಲ್ಲರಿಗೂ ಆರೋಗ್ಯ’ ಎಂಬಂತೆ, ಆರೋಗ್ಯ ಸೇವೆ ಕಲ್ಪಿಸುವಲ್ಲಿ ಶ್ರಮಿಸಲಾಗುತ್ತಿದೆ ಎಂದು ಡಾ.ಸತೀಶ್ ಕುಮಾರ್ ನುಡಿದರು.’ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಮಾತನಾಡಿ, ಕುಟುಂಬ ಯೋಜನೆ ಕಾಪಾಡುವ ನಿಟ್ಟಿನಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಏರ್ಪಡಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪುರುಷರ ಸಹಭಾಗಿತ್ವ ಅತ್ಯಗತ್ಯ ಎಂದರು.
ಪ್ರಸಕ್ತ ವರ್ಷ 18 ಗುರಿಯಲ್ಲಿ 10 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಪುರುಷರಿಗೆ 1100 ರು. ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ. ಒಂದು ಪ್ರಕರಣ ನ್ಯಾಯಾಲಯ ಹಂತದಲ್ಲಿದೆ ಎಂದು ಡಾ.ಆನಂದ್ ಮಾಹಿತಿ ನೀಡಿದರು.
ಎಚ್‌ಐವಿ ಬಗ್ಗೆ ಆಪ್ತ ಸಮಾಲೋಚನೆ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 11 ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ ಮಾತನಾಡಿ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಅಪೌಷ್ಟಿಕ ಮಕ್ಕಳ ಪಾಲನಾ ಕೇಂದ್ರ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಯೋಜನೆ, ನ್ಯೂಮೋನೀಯಾ ತಡೆಗಟ್ಟುವಿಕೆ, ಸಾಮಾಜಿಕ ಜಾಗೃತಿ ಮೂಡಿಸುವುದು, ಶುಚಿ ಕಾರ್ಯಕ್ರಮ, ವೈಪ್ಸ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ (ಸ್ನೇಹ ಕ್ಲಿನಿಕ್), ರಾಷ್ಟ್ರೀಯ ಅತಿಸಾರ ಭೇದಿ ನಿಯಂತ್ರಣ, ರಾಷ್ಟ್ರೀಯ ಜಂತುಹುಳು ನಿವಾರಣೆ ಹೀಗೆ ಹಲವು ಕಾರ್ಯಕ್ರಮಗಳು ಇವೆ ಎಂದರು.
ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಎನ್‌ಪಿಎನ್‌ಸಿಡಿ, ಸಮಗ್ರ ರೋಗಗಳ ಕಣ್ಗಾವಲು ಯೋಜನೆ, ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ, ರಾಷ್ಟ್ರೀಯ ಅಯೋಡಿನ್ ಕೊರತೆ ರೋಗಗಳ ನಿಯಂತ್ರಣ, ರೇಬಿಸ್ ನಿಯಂತ್ರಣ, ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ರಾಷ್ಟ್ರೀಯ ಕಾರ್ಯಕ್ರಮ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಎನ್‌ಪಿಎನ್‌ಸಿಡಿ ಕಾರ್ಯಕ್ರಮ, ಎನ್‌ಪಿಪಿಸಿ ಕಾರ್ಯಕ್ರಮ, ಎನ್‌ಪಿಎಚ್‌ಸಿಇ ಕಾರ್ಯಕ್ರಮ, ರಾಷ್ಟ್ರೀಯ ತಂಬಾಕು ನಿಯಂತ್ರಣ ಹೀಗೆ ವಿವಿಧ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಕಾರ್ಯಕ್ರಮದ ಉದ್ದೇಶ ಕುರಿತು ಮಾಹಿತಿ ನೀಡಿದರು. ದೇವರಾಜು, ಮಾಹಿತಿ ಶಿಕ್ಷಣ ವಿಭಾಗದ ಪಾಲಾಕ್ಷ, ಮಂಜುಳ, ಜ್ಯೋತಿ, ಸುನಿತಾ ಇತರರು ಇದ್ದರು.