ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಚಿತ್ರದುರ್ಗ ನಗರದಲ್ಲಿ ಬುಧವಾರ ಜಾಗೃತಿ ಜಾಥಾ ನಡೆಯಿತು.
ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಜಾಥಾದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ಬಾಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿ-ಕೆಲಸಕ್ಕಲ್ಲ, ಮಕ್ಕಳ ದುಡಿಮೆ ಜೀವನವಿಡೀ ಬವಣೆ, ಶಿಕ್ಷಣವಿಲ್ಲದ ಬಾಳು ಅಂಧಕಾರದ ಗೋಳು, ಮಕ್ಕಳಿಗೆ ವಿದ್ಯೆ-ದೊಡ್ಡವರಿಗೆ ಕೆಲಸ, ಮಕ್ಕಳ ದುಡಿಮೆ ಸಾಕು ಶಿಕ್ಷಣ ಬೇಕು, ಕೂಲಿ ಬಿಡಿಸಿ ಶಾಲೆಗೆ ಕಳುಹಿಸಿ, ಎಳೆಯ ವಯಸ್ಸು ಕಲಿಯುವ ವಯಸ್ಸು, ಬಾಲ್ಯದಲ್ಲಿ ಕಮರಿದ ಜೀವ ಮತ್ತೆಂದೂ ಅರಳದು, ಬೆಳೆಯುವ ವಯಸ್ಸಿನಲ್ಲಿ ದುಡಿಯಲು ದೂಡಬೇಡಿ, ಬಾಲಕಾರ್ಮಿಕ ಪದ್ದತಿ ನಿವಾರಣೆ ದೇಶದ ಸರ್ವತೋಮುಖ ಸುಧಾರಣೆ, ಮಕ್ಕಳಿಗೆ ಬೇಕು ಆಟ-ಪಾಠ, ಬೇಡ ಕಾರ್ಖನೆಗಳ ಕೆಲಸಗಳ ಕಾಟ, ಎಂಬಿತ್ಯಾದಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ಘೋಷಣೆಗಳು ಮೊಳಗಿದವು. ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲಾ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಜಾಥಾವು ಕಚೇರಿ ಹತ್ತಿರದ ಒನಕೆ ಒಬವ್ವ ವೃತ್ತದ ಬಳಿ ಆಗಮಿಸಿದಾಗ ಮಾನವ ಸರಪಳಿ ನಿರ್ಮಿಸಿ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಅವರು ಪ್ರಮಾಣ ವಚನ ಬೋಧಿಸಿದರು.ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಿಡಿದಿದ್ದ ಹಲವಾರು ಸಂದೇಶದ ಫಲಕಗಳು ಗಮನ ಸೆಳೆದವು. ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಎಸ್‍ಜೆಎಂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ, ಕಾರ್ಯದರ್ಶಿ ಆರ್.ಗಂಗಾಧರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಸಿ.ಪ್ರಭಾಕರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಿ.ಸವಿತಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ನಾಸೀರುದ್ದೀನ್, ಕಾರ್ಮಿಕ ಅಧಿಕಾರಿ ಬಿ.ಜಿ.ಚಂದ್ರಶೇಖರಯ್ಯ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಎಸ್‍ಜೆಎಂ ಕಾನೂನು ಕಾಲೇಜು ಪ್ರಾಂಶುಪಾಲ ದಿನೇಶ್, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಕಾಶ್ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.