ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

| Published : Jun 16 2024, 01:50 AM IST

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಯಿತು. ಕುಂದಾಪುರ ಎಸಿ ರಶ್ಮಿ ಎಸ್‌.ಆರ್. ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸುತ್ತದೆ. ಭಾರತದಲ್ಲಿ 1 ಮಿಲಿಯನ್ ಯುನಿಟ್ ರಕ್ತದ ಕೊರತೆಯಿದೆ. ರಕ್ತಕ್ಕೆ ಜಾತಿ, ಧರ್ಮ ಇಲ್ಲ ಮತ್ತು ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಅದನ್ನು ದಾನದ ಮೂಲಕವೇ ಅವಶ್ಯವಿದ್ದವರಿಗೆ ಪೂರೈಸಬೇಕಾಗಿದೆ. ಆದ್ದರಿಂದ ಎಲ್ಲ ಅರ್ಹ ದಾನಿಗಳು ರಕ್ತದಾನ ಮಾಡುವುದರ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕು ಎಂದು ಕುಂದಾಪುರ ಎಸಿ ರಶ್ಮಿ ಎಸ್‌.ಆರ್. ಹೇಳಿದರು.

ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಯೋಜಿಸಲಾದ ವಿಶ್ವ ರಕ್ತದಾನಿಗಳ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಪ್ರತೀ ಎರಡು ಸೆಕೆಂಡ್‌ಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ. ಒಬ್ಬ ಆರೋಗ್ಯವಂತ 18ನೇ ವರ್ಷಕ್ಕೆ ರಕ್ತದಾನ ಮಾಡಲು ಆರಂಭಿಸಿ ವರ್ಷಕ್ಕೆ 3 ಬಾರಿ ದಾನ ಮಾಡಿದರೆ, ಅವನಿಗೆ 60 ವರ್ಷ ಆಗುವಾಗ 30 ಗ್ಯಾಲನ್‌ನಷ್ಟು ರಕ್ತದಾನ ಮಾಡಿರುತ್ತಾರೆ. ಇದರಿಂದ ಕಡಿಮೆ ಪಕ್ಷ 500 ಜನರ ಜೀವ ಉಳಿಸಬಹುದು. ಆದ್ದರಿಂದ ತಾವೂ ರಕ್ತದಾನ ಮಾಡುವುದರೊಂದಿಗೆ ಇತರರಿಗೂ ದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಯ ಸಿಒಒ ಡಾ.ಆನಂದ್ ವೇಣುಗೋಪಾಲ್ ಗೌರವ ಅತಿಥಿಗಳಾಗಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ರಕ್ತ ಕೇಂದ್ರದ ಮುಖ್ಯಸ್ಥ ಡಾ.ಶಮೀ ಶಾಸ್ತ್ರಿ, ರಕ್ತ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಗಣೇಶ್ ಮೋಹನ್ ಉಪಸ್ಥಿತರಿದ್ದರು.

ರಕ್ತದಾನಿಗಳ ಪ್ರೇರಕರನ್ನು, ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ಅತ್ಯುತ್ತಮ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಕೆಎಂಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಲೋಗನ್ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರು. ಡಾ.ಶಮೀ ಶಾಸ್ತ್ರಿ ಕಾರ್ಯಕ್ರಮದ ಅವಲೋಕನ ನೀಡಿದರು. ಡಾ.ಗಣೇಶ್ ಮೋಹನ್ ವಂದಿಸಿದರು. ವಿಶ್ವೇಶ ಎನ್., ರಕ್ತದಾನಿಗಳ ಪ್ರೇರಕರ ಪಟ್ಟಿಯನ್ನು ಓದಿದರು. ಡಾ. ಚೆನ್ನ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.