ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಗ್ರಾಮೀಣ ಜನರಿಗೆ ಕಲ್ಪವೃಕ್ಷದಂತಿರುವ ಆದಿಚುಂಚನಗಿರಿ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವದರ್ಜೆಯ ಚಿಕಿತ್ಸೆಗಳು ಲಭ್ಯವಿದೆ ಎಂದು ಆದಿಚುಂಚನಗಿರಿ ವೈದಕೀಯ ಆಸ್ಪತ್ರೆಯ ವೈದ್ಯ ಡಾ. ರವಿ ನಾಗರಾಜಯ್ಯ ಹೇಳಿದರು.ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಆದಿಚುಂಚನಗಿರಿ ಆಸ್ಪತ್ರೆ ವತಿಯಿಂದ ನಡೆಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆದಿಚುಂಚನಗಿರಿ ಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮಿ ಅವರಿಗೆ ಗ್ರಾಮಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ನೀಡಬೇಕೆಂಬುದು ಅವರ ಕನಸಾಗಿತ್ತು. ಅದರಂತೆಯೇ ಬೆಳ್ಳೂರು ಕ್ರಾಸ್ ಬಳಿ ಸುಸಜ್ಜಿತವಾದ ಬೃಹತ್ ಆಸ್ಪತ್ರೆಯನ್ನು ತೆರೆದು ಉತ್ತಮ ಸೇವೆ ನೀಡಿದ್ದರು. ಈಗ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಇನ್ನೂ ಅತ್ಯತ್ತಮ ದರ್ಜೆಗೆ ಆಸ್ಪತ್ರೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಸಾವಿರ ಹಾಸಿಗೆಯ ಆಸ್ಪತ್ರೆ ಆಗಿದೆ. ಇತ್ತೀಚೆಗೆ ಇನ್ನೂ ಹೆಚ್ಚಿನ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತಿದೆ. ಇದನ್ನು ಗ್ರಾಮಾಂತರ ಪ್ರದೇಶದ ಜನರು ಸದುಪಯೋಗಪಡಿಕೊಳ್ಳಬೇಕೆಂದು ಹೇಳಿದರು.
ಮನುಷ್ಯನ ಇಂದಿನ ಜೀವನ ಶೈಲಿ ಬದಲಾಗಿದೆ. ಒತ್ತಡದ ಬದುಕು ರೂಢಿಸಿಕೊಂಡಿದ್ದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಇಂದಿನ ಕಲುಷಿತ ಆಹಾರ ಹಾಗೂ ಆನೇಕ ದುಶ್ಚಟಗಳಿಂದ ಮಾನವ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಆದ್ದರಿಂದ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯವೆಂದರು.ಶಿಬಿರದ ಪ್ರಾಯೋಜಕ ಹಾಗೂ ಮುಖಂಡ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿನ ಅಲ್ಪಸ್ವಲ್ಪ ಸಂಪತ್ತನ್ನು ಸಮಾಜಕ್ಕೆ ಒಳಿತಾಗುವ ಕಾರ್ಯಗಳಿಗೆ ವಿನಿಯೋಗಿಸಿದಲ್ಲಿ ಸಾರ್ಥಕತೆ ಸಿಗಲಿದೆ. ಆ ನಿಟ್ಟಿನಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ಜನತೆಯ ಆರೋಗ್ಯ ದೃಷ್ಟಿಯಿಂದ ಇಂತಹ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಸಹಾ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಶಿಬಿರದಲ್ಲಿ ನೂರಾರು ಜನರು ಹೃದ್ರೋಗ, ಕ್ಯಾನ್ಸರ್, ಮಧುಮೇಹ, ಬಿಪಿ, ನರರೋಗ, ಕಣ್ಣು, ಚರ್ಮ, ಸ್ತ್ರೀರೋಗ, ಇಸಿಜಿ, ಹೃದಯ, ಕಿಡ್ನಿ, ಕಿವಿ, ಮೂಗು, ಗಂಟಲು ತಪಾಸಣೆ ಮಾಡಿಸಿಕೊಂಡರು. ಉಚಿತವಾಗಿ ಔಷಧಿ ಮಾತ್ರೆಗಳನ್ನು ವಿತರಿಸಲಾಯಿತು. ರಕ್ತದಾನಿಗಳಿಂದ ರಕ್ತ ಶೇಖರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ಮಾಜಿ ಶಾಸಕ ಮಸಾಲ ಜಯರಾಮ್‌ರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ತಿಮ್ಮಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಅಂಜನ್‌ಕುಮಾರ್, ಚುಂಚನಗಿರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರವಿ, ಮೆಡಿಕಲ್ ನರಸಿಂಹಮೂರ್ತಿ, ಮುಖಂಡರಾದ ಡಿ.ಆರ್. ಬಸವರಾಜು, ಹಾಲೇಗೌಡ, ಸಿ.ಜೆ. ಆನಂದಪ್ಪ, ಬಿಎಂಎಸ್ ಉಮೇಶ್, ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.