ಸಂಡೂರು ಉತ್ತಮ ಪರಿಸರಕ್ಕೆ ಹೆಸರಾಗಿದೆ. ಇಲ್ಲಿನ ಸುಂದರ ಪರಿಸರವು ಮಹಾತ್ಮ ಗಾಂಧೀಜಿಯವರನ್ನು ಆಕರ್ಷಿಸಿತ್ತು.
ಸಂಡೂರು: ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ತಾಲೂಕು ಘಟಕದ ಕಾರ್ಯದರ್ಶಿ ಜಿ.ಎಸ್. ಸೋಮಪ್ಪ ಅವರು ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಸಂಡೂರು ಉತ್ತಮ ಪರಿಸರಕ್ಕೆ ಹೆಸರಾಗಿದೆ. ಇಲ್ಲಿನ ಸುಂದರ ಪರಿಸರವು ಮಹಾತ್ಮ ಗಾಂಧೀಜಿಯವರನ್ನು ಆಕರ್ಷಿಸಿತ್ತು. ಸೀ ಸಂಡೂರ್ ಇನ್ ಸೆಪ್ಟಂಬರ್ ಎಂಬ ಮಾತು ಇಲ್ಲಿ ಜನಜನಿತವಾಗಿದೆ. ಇಲ್ಲಿನ ಅರಣ್ಯ ಸಂಪತ್ತಿನಿಂದಾಗಿ ಸಂಡೂರನ್ನು ಆಕ್ಸಿಜನ್ ಬ್ಯಾಂಕ್ ಎಂದು ಕರೆಯಲಾಗುತ್ತಿದೆ. ಸುಂದರ ಪರಿಸರ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದರು.ಪುರಸಭೆ ಮಾಜಿ ಅಧ್ಯಕ್ಷೆ ಆಶಾಲತಾ ಸೋಮಪ್ಪ ಅವರು ಮಾತನಾಡಿ, ಉತ್ತಮ ಪರಿಸರವಿದ್ದರೆ ಮಾತ್ರ ನಾವು ಆರೋಗ್ಯದಿಂದ ಇರಲು ಸಾಧ್ಯ. ಸಂಡೂರಿನ ಅರಣ್ಯದಲ್ಲಿ ಹಲವು ರೀತಿಯ ಔಷಧೀಯ ಸಸ್ಯಗಳನ್ನು ಕಾಣುತ್ತೇವೆ. ವಿದ್ಯಾರ್ಥಿಗಳು ಆರೋಗ್ಯಕರ ಜೀವನ ವಿಧಾನವನ್ನು ರೂಪಿಸಿಕೊಳ್ಳಬೇಕಲ್ಲದೆ, ಶಾಲೆಯಲ್ಲಿ ಹಾಗೂ ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಶ್ರಮಿಸಬೇಕು ಎಂದರು. ಶಾಲೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಸಿಸ್ಟರ್ ಸಿಸಿಲಿಯಾ ಫೆಲಿಕ್ಸ್ ಅವರು ಪರಿಸರ ಸಂರಕ್ಷಣೆ ಹಾಗೂ ನಿರ್ಮಾಣದ ಮಹತ್ವ ಕುರಿತು ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು ಔಷಧೀಯ ಸಸ್ಯಗಳ ಮಹತ್ವ ಕುರಿತು ಕಿರು ರೂಪಕವನ್ನು ಪ್ರದರ್ಶಿಸಿದರೆ, ಓರ್ವ ವಿದ್ಯಾರ್ಥಿನಿ ಪರಿಸರದ ಮಹತ್ವ ಸಾರುವ ಹಾಡನ್ನು ಹಾಡಿದಳು.
ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೂಸಿ, ಸಿಸ್ಟರ್ ಸುಶೀಲ, ಸಿಸ್ಟರ್ ರಿಡಾಲಿನ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂಡೂರಿನ ಕೃಪಾನಿಲಯ ಶಾಲೆಯಲ್ಲಿ ಶುಕ್ರವಾರ ವಿಶ್ವಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.