ಜಗತ್ತಿಗೆ ಹೆಸರಾದ ಭಾರತೀಯ ಸಂಸ್ಕಾರ, ಸಂಸ್ಕೃತಿ

| Published : May 10 2024, 11:49 PM IST

ಸಾರಾಂಶ

ಜಗತ್ತಿನ ಕಣ್ಣಿಗೆ ಹೆಣ್ಣು ಕೇವಲ ಭೋಗದ ವಸ್ತು. ಆ ಹೆಣ್ಣಿನಲ್ಲಿ ತಾಯಿತನ, ದೈವತ್ವ, ಸಹೋದರತ್ವ ಕಂಡ ದೇಶ ಜಗತ್ತಿನ ಭೂಪಟದಲ್ಲಿ ಇದ್ದರೆ ಅದು ಭಾರತ. ಅಂತಹ ಸಂಸ್ಕಾರ, ಸಂಸ್ಕೃತಿ ನಮ್ಮಲ್ಲಿದೆ.

ಗದಗ:

ಅತ್ಯುನ್ನತವಾದ ಸಂಸ್ಕಾರ, ಸಂಸ್ಕೃತಿಗೆ ಜಗತ್ತಿನಲ್ಲಿಯೇ ಹೆಸರಾಗಿರುವ ಭಾರತಕ್ಕೆ ತನ್ನದೇ ಆದ ಹಿರಿಮೆ-ಗರಿಮೆಯ ಸ್ಥಾನವಿದೆ ಎಂದು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಜ. ಬೂದೀಶ್ವರ ಸ್ವಾಮೀಜಿ ಹೇಳಿದರು.

ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದ 17ನೇ ವಾರ್ಷಿಕೋತ್ಸವದ ನಿಮಿತ್ತ ಶ್ರೀಶಿರಡಿ ಸಾಯಿಬಾಬಾ ಸತ್ಸಂಗ ಏರ್ಪಡಿಸಿದ್ದ ಸಾಯಿಬಾಬಾರ ಧುನಿ ಶಿಲಾನ್ಯಾಸ, ಶ್ರೀಸಾಯಿ ಛಾಯಾಛತ್ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ತನಗರಿವಿಲ್ಲದೆ ಜಗತ್ತು ಭಾರತಕ್ಕೆ ಕೈ ಮುಗಿಯುತ್ತದೆ. ಎಂತಹ ನಾಸ್ತಿಕನೂ ಕೂಡ ತಲೆ ಬಾಗಿ ನಮಿಸುವನು. ಇದಕ್ಕೆ ಕಾರಣ ಭಾರತದ ಸಂಸ್ಕಾರ, ಸಂಸ್ಕೃತಿ. ಮಹಾನ್ ತಪಸ್ವಿಗಳು, ತತ್ವಜ್ಞಾನಿಗಳು, ಧರ್ಮ ಗುರುಗಳು ಭದ್ರವಾದ ತತ್ವ ಸಂದೇಶ, ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಿದ್ದಾರೆ ಎಂದರು.

ಜಗತ್ತಿನ ಕಣ್ಣಿಗೆ ಹೆಣ್ಣು ಕೇವಲ ಭೋಗದ ವಸ್ತು. ಆ ಹೆಣ್ಣಿನಲ್ಲಿ ತಾಯಿತನ, ದೈವತ್ವ, ಸಹೋದರತ್ವ ಕಂಡ ದೇಶ ಜಗತ್ತಿನ ಭೂಪಟದಲ್ಲಿ ಇದ್ದರೆ ಅದು ಭಾರತ. ಅಂತಹ ಸಂಸ್ಕಾರ, ಸಂಸ್ಕೃತಿ ನಮ್ಮಲ್ಲಿದೆ ಎಂದರು.

ದೇವಮಾನವರಾಗಿದ್ದ ಶಿರಡಿ ಸಾಯಿಬಾಬಾ ಸಕಲರಲ್ಲಿ, ಸಕಲ ಪ್ರಾಣಿ-ಜೀವಿಗಳಲ್ಲಿ ದೇವರ ಸ್ವರೂಪ ಕಾಣಬೇಕು. ಸಂಕಷ್ಟದಲ್ಲಿ ಇರುವವರಿಗೆ, ನಿರ್ಗತಿಕರಿಗೆ ಸಹಾಯ ಮಾಡಬೇಕು, ದಾನ-ಧರ್ಮ ಮಾಡಬೇಕು ಎಂದು ಬೋಧಿಸುವ ಮೂಲಕ ಸಬ್ ಕಾ ಮಾಲೀಕ ಏಕ್ ಹೈ ಎಂದು ಎಲ್ಲರಲ್ಲಿ ಸದ್ಭಾವನೆ ಮೂಡಿಸಿದವರು. ಬಾಬಾ ಸಂಕಷ್ಟದಲ್ಲಿ ಇರುವವರನ್ನು ಸಂರಕ್ಷಿಸಿ ನೆರವು ನೀಡು, ಅಲ್ಲೇ ದರ್ಶನ ಕೊಡುವೆ, ಹಸಿದ ಹೊಟ್ಟೆಗೆ ಅನ್ನ ನೀಡುವುದು ಮುಖ್ಯ ಎಂದು ಬೋಧಿಸಿದ್ದಾರೆ ಎಂದು ತಿಳಿಸಿದರು.

ಶ್ರೀಸಾಯಿ ಸಂಸ್ಥಾನ ಶಿರಡಿ ಕ್ಷೇತ್ರದ ಸೇವಾ ನಿವೃತ್ತ ಪುರೋಹಿತ ಬಾಳಾಸಾಹೇಬ ಜೋಶಿ ಮಾತನಾಡಿ, ಶ್ರದ್ಧಾ ಭಕ್ತಿಯಿಂದ ಸ್ಮರಣೆ, ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಮುನ್ನಡೆದರೆ ಬಾಬಾ ಶುಭಾಶೀರ್ವದಿಸಿ ಮುನ್ನಡೆಸುವರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿರಡಿ ಸಾಯಿಬಾಬಾ ಸತ್ಸಂಗದ ಅಧ್ಯಕ್ಷ ಮಹೇಶಗೌಡ ತಲೇಗೌಡ್ರ, ಸಾಯಿಬಾಬಾ ಮಂದಿರದ ಧರ್ಮ ಕಾರ್ಯಗಳನ್ನು ವಿವರಿಸಿದರು. ಡಾ. ಎಸ್.ಬಿ. ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಶಿರಡಿ ಸಾಯಿಬಾಬಾ ಸತ್ಸಂಗದ ಮಾಜಿ ಅಧ್ಯಕ್ಷ ಗಂಗಣ್ಣ ಕೋಟಿ, ಶಿರಡಿಯ ಅರ್ಚಕ ಅವಿನಾಶ ಸುಲಾಖೆ, ರಘುವೀರ ಫತ್ತೇಪೂರ, ಐ.ಕೆ. ಬಲೂಚಿಗಿ, ಕೆ. ನಾಗೇಶರಾವ್, ಉಮೇಶ ನಾಲ್ವಾಡ, ಸಂಜಯ ರೊದ್ದಂ, ದೀಪಕ ಸುಲಾಖೆ, ಡಾ. ಎಸ್.ಡಿ. ಯರಗೇರಿ, ಸಿದ್ದಣ್ಣ ಗೌರಿಪುರ, ರಾಮಣ್ಣ ಕಾಶಪ್ಪನವರ, ರವಿರಾಜ ಕೋಟಿ, ಸದಾಶಿವಪ್ಪ ವಾಲಿ, ಯಲ್ಲೋಸಾ ಹಬೀಬ, ರವಿಪ್ರಕಾಶ ರಡ್ಡಿ, ದುಂಡಪ್ಪ ಮಲ್ಲಾಡದ, ಜಗದೀಶ ಪೂಜಾರ ಸೇರಿದಂತೆ ಭಕ್ತರು ಇದ್ದರು. ಕಾರ್ಯದರ್ಶಿ ರವಿಶಂಕರ ಚಿಂಚಲಿ ನಿರೂಪಿಸಿ, ವಂದಿಸಿದರು.