ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಿ: ಸುರೇಂದ್ರ ನಾಯಕ್

| Published : Feb 11 2024, 01:49 AM IST

ಸಾರಾಂಶ

ವಿವಿಧ ರಂಗಗಳಲ್ಲಿನ ಕೊಂಕಣಿ ಭಾಷಾ ಸಾಧಕರಿಗೆ ೨೦೨೩ರ ಸಾಲಿನ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾಷೆ ತಾಯಿಗೆ ಸಮಾನ. ಹೃದಯದಲ್ಲಿ ಭಾಷಾ ಪ್ರೀತಿಯಿದ್ದಾಗ ಅದು ನಾಲಿಗೆ ಮತ್ತು ಮನೆಯೊಳಗೆ ನೆಲೆಸಲು ಸಾಧ್ಯ. ಬದಲಾವಣೆಯ ಕಾಲಘಟ್ಟದಿಂದಾಗಿ ಭಾಷೆಗೆ ಎದುರಾಗಿರುವ ಸವಾಲನ್ನು ಮಕ್ಕಳು ಮತ್ತು ಯುವಜನತೆಯಲ್ಲಿ ಭಾಷಾಭಿಮಾನ ಗಟ್ಟಿಗೊಳಿಸುವ ಮೂಲಕ ಉತ್ತಮ ಭವಿಷ್ಯ ನಿರೀಕ್ಷಿಸಲು ಸಾಧ್ಯ ಎಂದು ಎಂ.ಆರ್.ಪಿ.ಎಲ್. ಹಣಕಾಸು ವಿಭಾಗದ ಚೀಫ್ ಜನರಲ್ ಮ್ಯಾನೇಜರ್ ಸುರೇಂದ್ರ ನಾಯಕ್ ಹೇಳಿದರು. ಅವರು ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶನಿವಾರ ಅರಂಭಗೊಂಡ ಎರಡು ದಿನಗಳ ವಿಶ್ವ ಕೊಂಕಣಿ ಸಮಾರೋಹ, ಪ್ರಶಸ್ತಿ ಪ್ರದಾನ -೨೦೨೩, ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೊಂಕಣಿ ಭಾಷೆ ಕಲಬೆರಕೆ, ಬಳಕೆಯಲ್ಲಿ ಇಳಿಮುಖವಾಗುವ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ಸಾಹಿತ್ಯ ಸಂಶೋಧನೆಯಿಂದ ಕೊಂಕಣಿಯ ತಳಪಾಯ ಗಟ್ಟಿಗೊಳಿಸಬಹುದು. ಆದರೆ ಬಳಕೆಯಿಂದ ಮಾತ್ರ ಅಲ್ಲಿ ಉನ್ನತ ಭವಿಷ್ಯದ ಸೌಧ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾದ ಈ ದಿನಗಳಲ್ಲಿ ಭಾಷೆ , ಸಂಸ್ಕೃತಿಯನ್ನು ರೀಲ್ಸ್, ವೀಡಿಯೋ, ಸಿನಿಮಾಗಳ ಮೂಲಕ ಜನಮನವನ್ನು ತಲುಪಿಸುವ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದವರು ಹೇಳಿದರು.

ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಂದ ಗೋಪಾಲ ಶೆಣೈ, ಕೊಂಕಣಿ ಭಾಷಿಗರ ವಲಸೆಯ ಇತಿಹಾಸ ಮತ್ತೆ ಹೊಸರೂಪ ತಳೆದಿದೆ. ಪರವೂರು, ವಿದೇಶಕ್ಕೆ ಕೊಂಕಣಿ ಭಾಷಿಗರ ವಲಸೆಯಿಂದಾಗಿ ನಮ್ಮ ಭಾಷೆ, ಆಹಾರ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಗಳಿಗೆ ಸವಾಲು ಎದುರಾಗಿದೆ, ಭಾಷಾ ಕಾಳಜಿಯಿಂದ ಎಲ್ಲರೂ ಅದರ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದರು. ಪ್ರತಿಷ್ಠಾನದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಡಾ. ಕಿರಣ್ ಬುಡ್ಕುಳೆ, ಕೋಶಾಧಿಕಾರಿ ಬಿ.ಆರ್. ಭಟ್, ಟ್ರಸ್ಟಿಗಳಾದ ಡಾ.ಕೆ. ಮೋಹನ್ ಪೈ, ರಮೇಶ್ ನಾಯಕ್, ಮೆಲ್ವಿನ್ ರೋಡ್ರಿಗಸ್, ಆಡಳಿತಾಧಿಕಾರಿ ಡಾ.ಬಿ. ದೇವದಾಸ ರೈ , ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಯ್ಕ್ ಉಪಸ್ಥಿತರಿದ್ದರು. ಬಳಿಕ ಕೊಂಕಣಿ ರಂಗಭೂಮಿ ಪ್ರಸ್ತುತ ಮತ್ತು ಭವಿಷ್ಯ, ಕೊಂಕಣಿ ಸಾಹಿತ್ಯಕ್ಕೆ ಮಹಿಳಾ ಲೇಖಕಿಯರ ದೇಣಿಗೆ ಕುರಿತ ಸಂವಾದ , ಕೊಂಕಣಿ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯ ಕುರಿತಂತೆ ಗೌರೀಶ್ ಪ್ರಭು, ಗೋವಾದ ಹೊರಗೆ ಕೊಂಕಣಿ ಸ್ಥಿತಿಗತಿ ಕುರಿತು ಡಾ. ಕೆ. ಮೋಹನ ಪೈ ಅವರಿಂದ ಗೋಷ್ಠಿಗಳು ನಡೆದವು.ಡಾ. ವೈಷ್ಣವಿ ಕಿಣಿ ಕೊಂಕಣಿ ಆಶಯ ಗೀತೆ ಪ್ರಸ್ತುತಪಡಿಸಿದರು. ಶಕುಂತಲಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇಂದು ಪ್ರಶಸ್ತಿ ಪ್ರದಾನ: ವಿವಿಧ ರಂಗಗಳಲ್ಲಿನ ಕೊಂಕಣಿ ಭಾಷಾ ಸಾಧಕರಿಗೆ ೨೦೨೩ರ ಸಾಲಿನ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಲಿದೆ. ಅನಿವಾಸಿ ಭಾರತೀಯರ ಕೊಂಕಣಿ ಕಾಳಜಿ ಕುರಿತ ಸಂವಾದದ ಬಳಿಕ ವಿಮಲಾ ವಿ.ಪೈ ಕೊಂಕಣಿ ಜೀವನ ಸಿದ್ಧಿ ಸಮ್ಮಾನ (ರಮಾನಂದ ರಾಯ್ಕರ್) ಕವಿತಾ ಕೃತಿ ಪುರಸ್ಕಾರ (ಆರ್.ಎಸ್. ಭಾಸ್ಕರ್), ಸಾಹಿತ್ಯ ಪುರಸ್ಕಾರ (ಪ್ರಕಾಶ್ ರ‍್ಯೇಂಕರ್) ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರ ( ಶ್ರೀಮತಿ ಶಕುಂತಲಾ ಅಜಿತ್ ಭಂಡಾರ್ಕರ್ , ಜೋಸೆಫ್ ಕ್ರಾಸ್ತಾ) ಡಾ.ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ( ಕಾಸರಗೋಡು ಚಿನ್ನಾ ) ಅನುವಾದ ಪುರಸ್ಕಾರ ( ರಮೇಶ್ ಲಾಡ್) ಪ್ರದಾನ ನಡೆಯಲಿದೆ.