ಹೊಸಪೇಟೆ: ಜಗತ್ತಿಗೆ ಶಾಂತಿ, ಅಹಿಂಸೆ, ಕರುಣೆಯ ಸಂದೇಶ ಸಾರಿದ ಬುದ್ಧ ಜಯಂತಿಯ ಆಚರಣೆಯು ಕೇವಲ ಒಂದು ಸಂಪ್ರದಾಯವಾಗದೇ ಬುದ್ಧನ ಬೋಧನೆ, ಆದರ್ಶಗಳನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಂತಿ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ವಿಶ್ವಶಾಂತಿ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ- ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಬುದ್ಧನ ವಿಚಾರಗಳು ಇಂದಿನ ಜಾಗತಿಕ ಸಂಘರ್ಷಗಳು ದೇಶದ ಆಂತರಿಕ ಭಿನ್ನಾಭಿಪ್ರಾಯಗಳು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಅತ್ಯಂತ ಪ್ರಸ್ತುತವಾಗಿವೆ. ರಾಜವಂಶದಲ್ಲಿ ಹುಟ್ಟಿ, ಸಕಲ ಸುಖ​ ಸೌಲಭ್ಯಗಳಿದ್ದರೂ ಸಿದ್ಧಾರ್ಥನು ಅವೆಲ್ಲ ತ್ಯಜಿಸಿ ಬುದ್ಧನಾದದ್ದು ಸಮಾಜದ ಪರಿವರ್ತನೆಗಾಗಿ. ಅವರ ಈ ಚಿಂತನೆಗಳು ದೇಶ ವಿದೇಶಗಳಲ್ಲಿ ಪಸರಿಸಿವೆ ಎಂದರು.

ಮನುಷ್ಯನಲ್ಲಿ ಇಂದು ಬಿಪಿ, ಶುಗರ್, ಒತ್ತಡದಂತಹ ಆರೋಗ್ಯ ಸಮಸ್ಯೆಗಳಿಗೆ ಅತಿಯಾದ ಆಸೆ ಮತ್ತು ದುರಾಸೆಯೇ ಮುಖ್ಯ ಕಾರಣ. ನೆರೆಹೊರೆಯವರೊಂದಿಗೆ ಜಗಳ ಅಥವಾ ಭೂಮಿಯ ಮೇಲಿನ ದುರಾಸೆ ಇವೆಲ್ಲವೂ ನಮ್ಮನ್ನು ನೆಮ್ಮದಿಯಿಂದ ದೂರ ಮಾಡುತ್ತಿವೆ. ಅಶೋಕ ಚಕ್ರವರ್ತಿಯು ಬುದ್ಧನ ಶಾಂತಿ ಸಂದೇಶದಿಂದ ಪ್ರಭಾವಿತನಾಗಿ ಬೌದ್ಧ ಧರ್ಮ ಪ್ರಸಾರ ಮಾಡಿದನು. ಅದು ಇಂದಿಗೂ ನಮ್ಮ ರಾಷ್ಟ್ರಧ್ವಜದಲ್ಲಿ ಗೌರವಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಬುದ್ಧನ ವಿಚಾರಗಳನ್ನು ಕೇವಲ ಕೇಳುವುದಕ್ಕಿಂತ, ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಬದುಕಿನ ಸಾರ್ಥಕತೆಗೆ ದಾರಿಯಾಗಲಿದೆ ಎಂದರು.

ಉಪನ್ಯಾಸಕಿ ಡಾ.ಉಮಾ ಬುದ್ಧ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರಾಜಕುಮಾರ ಸಿದ್ಧಾರ್ಥನು ಜಗತ್ತಿನ ದುಃಖಕ್ಕೆ ಮೂಲ ಕಾರಣ ಹುಡುಕುತ್ತಾ ಹೊರಟು, ಬೋಧಗಯಾದಲ್ಲಿ ಆರು ವರ್ಷಗಳ ಕಠಿಣ ತಪಸ್ಸಿನ ನಂತರ ಜ್ಞಾನೋದಯ ಪಡೆದು ಬುದ್ಧನಾದ. ಧ್ಯಾನವೆಂದರೆ ಏನನ್ನೋ ಪಡೆಯುವುದಲ್ಲ, ಬದಲಿಗೆ ನಮ್ಮೊಳಗಿನ ಕೋಪ, ಭಯ, ಅಹಂಕಾರ ಕಳೆದುಕೊಂಡು ಶಾಂತಿ ಪಡೆಯುವುದು. ಇಂದಿನ ಸಮಾಜದಲ್ಲಿ ಶಾಂತಿ, ಸತ್ಯ ನೆಲೆಸಲು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶ, ಬೋಧನೆಗಳೇ ಕಾರಣವಾಗಿವೆ ಎಂದರು.


ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ, ಬೌದ್ಧ ಧರ್ಮದ ಅಸ್ತಿತ್ವ ಮತ್ತು ಶಿಸ್ತು ಈ ಮೂರು ತತ್ವಗಳ ಮೇಲೆ ನಿಂತಿದೆ. ಮನುಷ್ಯನು ಅಹಂಕಾರ ತ್ಯಜಿಸಿ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಸತ್ಯವನ್ನು ಗೆಲ್ಲಲು ಸಾಧ್ಯ ಎಂದರು.

ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ತಹಸೀಲ್ದಾರ್ ಎಂ.ಶ್ರುತಿ, ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ, ಸಮಾಜದ ಮುಖಂಡ ಸೋಮಶೇಖರ್ ಬಣ್ಣದಮನಿ ಇದ್ದರು.