ಸಾರಾಂಶ
ವಿಜಯಪುರ: ದೃಢಸಂಕಲ್ಪದಿಂದ ಮುನ್ನುಗ್ಗಿದಾಗ ಸಾಧನೆ ಸಾಧ್ಯ ಎಂಬುದನ್ನು ತಾಲೂಕಿನ ನಾಗಠಾಣ ಗ್ರಾಮದ ಈ ಅವಳಿ ಸಹೋದರಿಯರು ಸಾಬೀತುಪಡಿಸಿದ್ದಾರೆ. ಶಿಕ್ಷಕ ಸಂತೋಷ ಬಂಡೆ ಹಾಗೂ ಸುರೇಖಾ ಬಂಡೆ ಅವರ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ ಹಾಗೂ ಶ್ರೀನಿಧಿ ಬಂಡೆ ಸದ್ಯ ಯುಕೆಜಿ ತರಗತಿಯಲ್ಲಿ ಓದುತ್ತಿದ್ದು, ಅವರು ಕೇವಲ 47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಹೇಳಿ ನೂತನ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನವರು ಚಿಕ್ಕ ಮಕ್ಕಳ ಈ ಅಪರೂಪದ ಗ್ರಹಿಕಾ ಶಕ್ತಿ, ಬುದ್ಧಿಶಕ್ತಿಯನ್ನು ಪರಿಗಣಿಸಿ, ರೆಕಾರ್ಡ್ ಟೈಟಲ್ ಸರ್ಟಿಫಿಕೆಟ್, ಟ್ರೋಫಿ, ಬ್ಯಾಡ್ಜ್, ಮೆಡಲ್ ನೀಡುವ ಮೂಲಕ ನೂತನ ವಿಶ್ವ ದಾಖಲೆಯ ಹೆಮ್ಮೆಯೊಂದಿಗೆ ಗೌರವಿಸಿದ್ದಾರೆ. 47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆ ಹೇಳಿದ ಯುಕೆಜಿ ಅವಳಿ ಸಹೋದರಿಯರು-ಎಂಬ ತಲೆಬರಹದ ಮೂಲಕ ಬುದ್ಧಿಶಕ್ತಿ ವಿಭಾಗದಲ್ಲಿ ಇದೊಂದು ನೂತನ ವಿಶ್ವದಾಖಲೆಯ ಸಾಧನೆ ಎಂದು ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ ನವರು ಘೋಷಿಸಿ ಗೌರವಿಸಿದ್ದಾರೆ.