ವಿಶ್ವ ಪ್ರವಾಸೋದ್ಯಮ ದಿನ: ವಿವಿಧ ಸ್ಪರ್ಧೆ

| Published : Aug 10 2025, 01:30 AM IST

ವಿಶ್ವ ಪ್ರವಾಸೋದ್ಯಮ ದಿನ: ವಿವಿಧ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.22ರಂದು ಆಯೋಜಿಸಲಾಗಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ವಿನೂತನ ರೀತಿಯ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಶಿವಮೊಗ್ಗ: ಸೆ.22ರಂದು ಆಯೋಜಿಸಲಾಗಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ವಿನೂತನ ರೀತಿಯ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜನಮನ ಸೆಳೆಯುವ ದೃಷ್ಟಿಯಿಂದ ಜಿಲ್ಲೆಯ ಹೋಟೆಲ್ ಮಾಲೀಕರೂ, ಟ್ಯಾಕ್ಸಿ ಮಾಲೀಕರು, ಬಸ್ ಮಾಲೀಕರು, ಯೂಟೂಬರ್ಸ್, ಛಾಯಾಗ್ರಾಕರು, ಸಾಹಸ-ಕ್ರೀಡಾ ಕೇಂದ್ರಗಳ ನಿರ್ವಾಹಕರು, ಮತ್ತಿತರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.ಸ್ಪರ್ಧೆಗಳಲ್ಲಿ ಭಾಗವಹಿಸುವವರು ಆನ್‌ಲೈನ್ ಮೂಲಕ ಆ.11 ರಿಂದ 20ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿದ ಸ್ಪರ್ಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಸಮಿತಿಯ ನಿರ್ಣಯದಂತೆ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದರು.ವಿಡಿಯೋಗ್ರಫಿ ಸ್ಪರ್ಧೆ:

ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 40 ಸಾವಿರ ರು., ದ್ವಿತೀಯ ಬಹುಮಾನ 30 ಸಾವಿರ ರು. ಹಾಗೂ ತೃತೀಯ ಬಹುಮಾನ 20 ಸಾವಿರ ರು.ಗಳ ನಗದು ಬಹುಮಾನ ನೀಡಲಾಗುವುದು. ಅಲ್ಲದೇ 25 ಸಾವಿರ ರು.ಗಳ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್‌ಸ್ಪರ್ಧೆ :

ಪ್ರತ್ಯೇಕವಾಗಿರುವ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅನುಕ್ರಮವಾಗಿ 8 ಸಾವಿರ ರು., 5 ಸಾವಿರ ರು. ಮತ್ತು 3 ಸಾವಿರ ರು.ಗಳ ನಗದು ಪುರಸ್ಕಾರ ನೀಡಲಾಗುವುದು. ಅಲ್ಲದೇ 10 ಸಾವಿರ ರು.ಗಳ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.ಲಾಂಛನ ವಿನ್ಯಾಸ ಸ್ಪರ್ಧೆ:

ಜಿಲ್ಲೆಯ ಮಹತ್ವದ ಹಲವು ವಿಶೇಷತೆಗಳನ್ನು ಬಿಂಬಿಸುವಂತೆ ಅತ್ಯುತ್ತಮ ರೀತಿಯಲ್ಲಿ ಲಾಂಛನ ವಿನ್ಯಾಸಗೊಳಿಸುವ ವಿನ್ಯಾಸಕಾರರಿಗೆ 30 ಸಾವಿರ ರು.ಗಳ ಬಹುಮಾನ ನೀಡಲಾಗುವುದು ಎಂದರು.ಘೋಷವಾಕ್ಯ ಸ್ಪರ್ಧೆ:

ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ, ಎಲ್ಲರನ್ನೂ ಆಕರ್ಷಿಸುವ ರೀತಿಯಲ್ಲಿ ಜಿಲ್ಲೆಯನ್ನು ಇಲ್ಲಿನ ಮಹತ್ವಗಳನ್ನು ಪರಿಚಯಿಸುವ ಹಾಗೆ ಘೋಷವಾಕ್ಯ ರಚಿಸುವ ಓರ್ವರಿಗೆ 5 ಸಾವಿರ ರು. ಗಳ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ, ಶೇಖರ್ ಗೌಳೇರ್, ಜಿಲ್ಲಾ ಛಾಯಾಗ್ರಾಹಕ ಸಂಘದ ಗೌರವ ಅಧ್ಯಕ್ಷ ಶ್ರೀಧರ್, ಹಿರಿಯ ಛಾಯಾಗ್ರಾಹಕ ಆಯನೂರು ಗಿರೀಶ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಮೇಶ್ ಇದ್ದರು.--ಬಾಕ್ಸ್‌-1

120 ಕೋಟಿ ರು. ಪ್ರಸ್ತಾವನೆಈಗಾಗಲೇ ಗುರುತಿಸಲಾಗಿರುವ ಸ್ಥಳಗಳಿಗೆ ಪ್ರವಾಸಿಗರು ಹೋಗಿ ಬರಲು ಅನುಕೂಲವಾಗುವಂತೆ ಹಾಗೂ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲಭೂತ ಸೌಕರ್ಯ, ರಸ್ತೆ ಸಂಚಾರ, ಮಾಹಿತಿಯುಕ್ತ ಪ್ರಚಾರಫಲಕ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಜಿಲ್ಲೆಯ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಈಗಾಗಲೇ 120 ಕೋಟಿ ರು.ಗಳ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಗಮನಕ್ಕೆ ತರಲಾಗಿದೆ. ಸಚಿವರು ಜಿಲ್ಲೆಯ ವಿಕಾಸಕ್ಕೆ ಪೂರಕವಾಗಿ ಈ ಯೋಜನೆಗೆ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದರು.

ಇಲ್ಲಿನ ಪ್ರವಾಸಿ ತಾಣಗಳು, ಮಂದಿರ-ಮಸೀದಿ-ಚರ್ಚುಗಳು, ಐತಿಹಾಸಿಕ ಸ್ಥಳಗಳು, ಕವಿ-ಕಲಾವಿದರು, ಸಾಹಿತ್ಯ, ನೃತ್ಯ ಸಂಗೀತ ಕ್ಷೇತ್ರದ ಸಾಧಕರು, ನದಿ-ನಾಲೆ-ಜಲಪಾತಗಳು, ತಪ್ಪಲು ಪ್ರದೇಶಗಳು ಮತ್ತಿತರ ವಿವರಗಳನ್ನು ಸಚಿತ್ರವಾಗಿ ಸಾಮಾಜಿಕ ಜಾಲತಾಣಗಳು ಮತ್ತಿತರ ಪ್ರಸಾರ ಮಾಧ್ಯಮಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಜಿಲ್ಲೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಜಿಲ್ಲೆಯ ವೆಬ್‌ಸೈಟನ್ನು ವಿನ್ಯಾಸಗೊಳಿಸಿ, ಸೆ.22ರಂದು ಲೋಕಾರ್ಪಣೆಗೊಳಿಸಲಾಗುವುದು. ಜಾಲತಾಣದಲ್ಲಿ ಅತ್ಯಪರೂಪದ ಜಿಲ್ಲೆಯ ವಿಶೇಷಗಳಿರುವ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸ್ಪರ್ಧೆಗೆ ಬಂದ ಆಯ್ದ ಉತ್ತಮ ಛಾಯಾಚಿತ್ರಗಳನ್ನು ವೆಬ್‌ಸೈಟ್‌ಗೆ ಬಳಸಿಕೊಳ್ಳಲಾಗುವುದು.

- ಎನ್.ಹೇಮಂತ್, ಜಿ.ಪಂ ಸಿಇಒ