ಕಾರವಾರದಲ್ಲಿ ಬಿಸಿಯೂಟಕ್ಕೆ ಪೂರೈಸಿದ ಅಕ್ಕಿಯಲ್ಲಿ ಹುಳು, ಅಸಮಾಧಾನ

| Published : Jul 06 2025, 01:48 AM IST

ಕಾರವಾರದಲ್ಲಿ ಬಿಸಿಯೂಟಕ್ಕೆ ಪೂರೈಸಿದ ಅಕ್ಕಿಯಲ್ಲಿ ಹುಳು, ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ನಗರದ ಬಝಾರ್‌ ಶಾಲೆಯಲ್ಲಿ ಬಿಸಿಯೂಟಕ್ಕೆ ಪೂರೈಸಿದ ಅಕ್ಕಿಯಲ್ಲಿ ಹುಳುಗಳಿವೆ ಎಂದು ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಶಾಲೆಗೆ ಆಗಮಿಸಿದ ಪರಿಶೀಲಿಸಿದ್ದಾರೆ.

ಕಾರವಾರ: ಕಪ್ಪುಹುಳುಗಳಾಗಿರುವ ಅಕ್ಕಿಯನ್ನು ಶಾಲೆಗೆ ಪೂರೈಸಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು.

ಬಿಇಒ ಹಾಗೂ ಶಿಕ್ಷಣ ಅಧಿಕಾರಿಗಳು ಶಾಲೆಗೆ ಆಗಮಿಸಿ ಪರಿಶೀಲಿಸಿ, ಅಕ್ಕಿ ವಾಪಸ್ ಪಡೆದು ಬೇರೆ ಅಕ್ಕಿ ನೀಡಲಾಗುವುದು ಎಂದು ಹೇಳಿದರು.

ನಗರದ ಕುಂಠಿ ಮಹಮ್ಮಾಯಿ ದೇವಾಲಯ ಬಳಿ ಇರುವ ಹಿರಿಯ ಪ್ರಾಥಮಿಕ (ಬಝಾರ್ ) ಶಾಲೆಯಲ್ಲಿ ಬಿಸಿಯೂಟಕ್ಕೆ ಪೂರೈಸಲಾದ ಅಕ್ಕಿಯಲ್ಲಿ ಹುಳುಗಳಾಗಿವೆ. ಈ ಅಕ್ಕಿಯಲ್ಲಿ ಅನ್ನ ತಯಾರಿಸಿ ವಿದ್ಯಾರ್ಥಿಗಳಿಗೆ ಕೊಡುವುದು ಹೇಗೆ? ಪಾಠ ಮಾಡುವುದನ್ನು ಬಿಟ್ಟು ಅಕ್ಕಿ ಆರಿಸುವುದೆ ಕೆಲಸ ಆಗಿದೆ ಎಂದು ಶಿಕ್ಷಕಿಯರು ತಮ್ಮ ಗೋಳು ತೋಡಿಕೊಂಡರು.

ಬಿಸಿಯೂಟಕ್ಕೆ ತಿಂಗಳಿಗೆ ನಾಲ್ಕು ಸಿಲಿಂಡರ್ ಬೇಕು. ಆದರೆ ಇಲಾಖೆಯಿಂದ ಕೇವಲ ಎರಡು ಸಿಲಿಂಡರ್ ಹಣ ಮಾತ್ರ ನೀಡುತ್ತಾರೆ. ಮೊಟ್ಟೆ, ಬಾಳೆಹಣ್ಣಿಗೆ ಕೊಡುವ ಹಣವೂ ಸಾಲುತ್ತಿಲ್ಲ. ಎಲ್ಲವನ್ನೂ ಶಿಕ್ಷಕಿಯರೇ ಭರಿಸುತ್ತಿದ್ದಾರೆ. ಬಿಸಿಯೂಟ ಯೋಜನೆ ಮಾಡಿ ಈ ರೀತಿ ಪೂರ್ಣ ಪ್ರಮಾಣದಲ್ಲಿ ಹಣ ಕೊಡದೆ ಶಿಕ್ಷಕಿಯರೇ ಭರಿಸಬೇಕೆಂದರೆ ಯೋಜನೆಯನ್ನಾದರೂ ಏಕೆ ಮಾಡಬೇಕು ಎಂದು ಶಾಲೆಯ ಆಡಳಿತ ಮಂಡಳಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ಸಿಬ್ಬಂದಿ ಜತೆ ಶಿಕ್ಷಕಿಯರು ಅಕ್ಕಿ ಆರಿಸುವುದಲ್ಲಿ ನಿರತರಾಗಿದ್ದು ಕಂಡುಬಂತು. ಪಾಠ ಮಾಡುವುದಕ್ಕಿಂತ ಅಕ್ಕಿ ಆರಿಸುವುದೇ ಸಮಸ್ಯೆಯಾಗಿದೆ ಎಂದು ಶಿಕ್ಷಕಿಯರು ಅಲವತ್ತುಕೊಂಡರು.

ಬಿಇಒ ಉಮೇಶ ನಾಯ್ಕ ಹಾಗೂ ಶಿಕ್ಷಣ ಅಧಿಕಾರಿ ವಿ.ಟಿ. ನಾಯ್ಕ ಶಾಲೆಗೆ ಆಗಮಿಸಿ, ಅಕ್ಕಿ ಪರಿಶೀಲಿಸಿ, ಶಿಕ್ಷಕಿಯರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಹುಳುಗಳಾದ ಅಕ್ಕಿಗೆ ಬದಲು ಬೇರೆ ಅಕ್ಕಿ ನೀಡಲು ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಅಕ್ಕಿಯನ್ನು ಚೆನ್ನಾಗಿ ನೀರಿನಿಂದ ತೊಳೆದು ಬಳಸುವಂತೆ ಸೂಚಿಸಿದರು.

ಶಾಲೆಗೆ ಪೂರೈಸಿದ ಅಕ್ಕಿಯಲ್ಲಿ ಹುಳುಗಳಾಗಿವೆ. ಇದನ್ನು ಮಕ್ಕಳ ಬಿಸಿಯೂಟಕ್ಕೆ ಬಳಸುವಂತಿಲ್ಲ. ಈ ಅಕ್ಕಿಯನ್ನು ಏನು ಮಾಡಬೇಕು ಎನ್ನುವುದು ಸಮಸ್ಯೆಯಾಗಿದೆ ಎಂದು ಆಡಳಿತ ಮಂಡಳಿ ಸದಸ್ಯ ಶ್ರೀಧರ ಶೇಟ್ ಹೇಳಿದರು.

ಯಾವುದೆ ಶಾಲೆಯಲ್ಲಿ ಹುಳು ಆಗಿರುವ ಅಕ್ಕಿ ಪೂರೈಕೆ ಮಾಡಲಾಗಿದೆ ಎಂಬ ದೂರುಗಳಿದ್ದಲ್ಲಿ ಪರಿಶೀಲಿಸಿ ಆ ಅಕ್ಕಿಯನ್ನು ಹಿಂದಕ್ಕೆ ಪಡೆದು ಬೇರೆ ಅಕ್ಕಿಯನ್ನು ನೀಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ ಹೇಳಿದರು.