ಜಯಪುರದಲ್ಲಿ ವಿಜೃಂಭಣೆಯ ಗುಜ್ಜಮ್ಮ ತಾಯಿ ರಥೋತ್ಸವ

| Published : Mar 21 2025, 12:37 AM IST

ಜಯಪುರದಲ್ಲಿ ವಿಜೃಂಭಣೆಯ ಗುಜ್ಜಮ್ಮ ತಾಯಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಮಟೆಯ ತಾಳಕ್ಕೆ ಯುವಕರು ನಂದಿಧ್ವಜ ಕಂಬವನ್ನು ಹೊತ್ತು ಕುಣಿದು ಕುಪ್ಪಳಿಸಿದರು

ಕನ್ನಡಪ್ರಭ ವಾರ್ತೆ ಮೈಸೂರುತಾಲೂಕಿನ ಜಯಪುರ ಗ್ರಾಮದಲ್ಲಿ ಗ್ರಾಮ ದೇವತೆ ಗುಜ್ಜಮ್ಮತಾಯಿ ಅವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.ಗಂಗಸ್ಥಾನ ಕೆಗ್ಗೆರೆಯಲ್ಲಿ ದೇವಿಯ ರಥಕ್ಕೆ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಿ ಮೆರವಣಿಗೆಗೆ ಚಾಲನೆ ದೊರೆಯಿತು. ರಥವನ್ನು ಬೃಹತ್ ಹೂವಿನ ಹಾರಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೇವಾಲಯ ಆವರಣಕ್ಕೆ ರಥವನ್ನು ಎಳೆದು ತಂದರು.ಮಲೆಯ ಋಷಿ ಕೋಣಪ್ಪ ಸ್ವಾಮಿ, ಚಿಕ್ಕದೇವಮ್ಮ, ಕೆಂಗಲಮ್ಮ ದೇವರ ಸತ್ತಿಗೆಗಳು ಮತ್ತು ಬಿರುದುಗಳು ಮೆರವಣಿಗಯಲ್ಲಿ ಸಾಗಿದವು. ಬಾಲಕಿಯರು ದೇವಿಯ ಹಾಲಾರವಿ ಹೊತ್ತು ತಂದರು.ತಮಟೆಯ ತಾಳಕ್ಕೆ ಯುವಕರು ನಂದಿಧ್ವಜ ಕಂಬವನ್ನು ಹೊತ್ತು ಕುಣಿದು ಕುಪ್ಪಳಿಸಿದರು. ಹರಕೆ ಹೊತ್ತ ಭಕ್ತರು ಬಾಯಿಬೀಗ ಧರಿಸಿ ದೇವರಿಗೆ ಹರಕೆ ಸಲ್ಲಿಸಿದರು. ಮಧ್ಯಾಹ್ನ 2ಕ್ಕೆ ಪ್ರಾರಂಭವಾದ ರಥೋತ್ಸವವು ಸಂಜೇ 5ರ ವೇಳೆ ಸ್ವಸ್ಥಾನ ಗುಜ್ಜಮ್ಮ ದೇಗುಲ ತಲುಪಿತು.ಭಕ್ತರಿಗೆ ಮಜ್ಜಿಗೆ, ಶರಬತ್ತು ಪಾನೀಯ, ಕಲ್ಲಂಗಡಿ ಹಣ್ಣು, ಪಾನಕವನ್ನು ವಿತರಿಸಿದರು. ಗ್ರಾಮಸ್ಥರು ದೇವಾಲಯ ಆವರಣದಲ್ಲಿ ಮಡೆ ಅನ್ನ ಮತ್ತು ಕೋಳಿ ಸಾಂಬಾರ್ ಪ್ರಸಾದ ಸಿದ್ದಪಡಿಸಿ ದೇವಿಗೆ ನೈವಿದ್ಯೆಯಾಗಿ ನೀಡಿ ಪೂಜೆ ಸಲ್ಲಿಸಿದರು.ಕೋಣಪ್ಪ ಸ್ವಾಮಿ ಯವರ ಸತ್ತಿಗೆಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಬುಧವಾರ ರಾತ್ರಿ ಗುಜ್ಜಮ್ಮ ತಾಯಿ ದೇಗುಲ ದಲ್ಲಿ ಹೋಮ ಹವಗಳನ್ನು ನೆರವೇರಿಸಿ, ದೇವಿಗೆ ಚಿನ್ನದ ಒಡವೆಗಳನ್ನು ಧರಿಸಿ, ಹೂವಿನ ಅಲಂಕಾರ ಮಾಡಿ, ಪೂಜಾ ಕಾರ್ಯಗಳನ್ನು ಮಾಡಲಾಯಿತು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.