ಹಂಪಿಯಲ್ಲಿ ಪುರಂದರದಾಸರ ಆರಾಧನೋತ್ಸವ

| Published : Feb 11 2024, 01:50 AM IST

ಸಾರಾಂಶ

ಶ್ರೀ ಪುರಂದರದಾಸರ ಆರಾಧನೋತ್ಸವದ ನಿಮಿತ್ತ ಹಂಪಿ ಶ್ರೀಪುರಂದರ ದಾಸರ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಪುರಂದರ ದಾಸರ ಪ್ರತಿಮೆಗೆ ವಿಶೇಷ ಫಲ ಪಂಚಾಮೃತಾಭಿಷೇಕ ನೆರವೇರಿಸಲಾಯಿತು.

ಹೊಸಪೇಟೆ: ಹಂಪಿ ಶ್ರೀಪುರಂದರ ದಾಸರ ಮಂಟಪದಲ್ಲಿ ಶ್ರೀ ಪುರಂದರದಾಸರ ಆರಾಧನೋತ್ಸವದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾರಾಧನೆ ಪ್ರಯುಕ್ತ ಶ್ರೀಪುರಂದರ ದಾಸರ ಪ್ರತಿಮೆಗೆ ವಿಶೇಷ ಫಲ ಪಂಚಾಮೃತಾಭಿಷೇಕ, ಅರ್ಚನೆ, ವಿವಿಧ ಹೂವುಗಳಿಂದ, ವಸ್ತ್ರಗಳಿಂದ ಅಲಂಕಾರ ಮಾಡಲಾಗಿತ್ತು.

ದಾಸರಾಯರ ಮಂಟಪವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

ಬಾಳಗಾರು ಶ್ರೀ ಅಕ್ಷೋಭ್ಯತೀರ್ಥ ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯಾ ತೀರ್ಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ವಿದ್ವಾನ್ ಸುಳಾದಿ ಹನುಮೇಶಾಚಾರ್ಯ ಹಾಗೂ ಹಂಪಿ ವಿರೂಪಾಕ್ಷ ದೇವಸ್ಥಾನದ ಅರ್ಚಕರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಶ್ರೀಅಕ್ಷೋಭ್ಯ ರಾಮಪ್ರಿಯಾ ತೀರ್ಥ ಸ್ವಾಮೀಜಿ ಅವರು ಬೆಂಗಳೂರಿನ ದಂಡಿನ್ ಅನಂತ ರಾವ್ ಸಿದ್ಧಪಡಿಸಿದ ಶ್ರೀಪುರಂದರ ದಾಸರ ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿ, ಮಂತ್ರಾಲಯ ಮಠದ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿಗಳು ದಾಸ ಸಾಹಿತ್ಯ ವಿಶೇಷ ಕಾರ್ಯಯೋಜನೆಗಳನ್ನು ಕೈಗೊಳ್ಳುವ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. ಮಂತ್ರಾಲಯದಲ್ಲಿ ದಾಸ ಸಾಹಿತ್ಯ ಮ್ಯೂಜಿಯಂ ಸ್ಥಾಪನೆ ಮಾಡಿದ್ದಾರೆ. ಆ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ದೇಶಾದ್ಯಂತ ನಡೆಸುತ್ತಿದ್ದಾರೆ ಎಂದರು.

ಶ್ರೀಪುರಂದರ ದಾಸರು ದಾಸ ಸಾಹಿತ್ಯಕ್ಕೆ ಮಾತ್ರವಲ್ಲದೆ, ಕನ್ನಡ ಸಾರಸ್ವತ ಲೋಕಕ್ಕೂ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಪುರಂದರ ದಾಸರ ಕೀರ್ತನೆಗಳು ಕೇವಲ ಆಧ್ಯಾತ್ಮಿಕ, ಭಗವಂತನ‌ ಸ್ತುತಿಸುವುದು ಮಾತ್ರವಲ್ಲದೆ ಮನುಷ್ಯನ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಯಪಡಿಸಿದ್ದಾರೆ. ದಾಸ ಸಾಹಿತ್ಯ ಮನುಕುಲದ ಒಳಿತಿಗಾಗಿ ‌ಹಲವು ವಿಷಯಗಳನ್ನು ಹೇಳಿದ್ದಾರೆ. ಅವರ ಆದರ್ಶ, ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.

ಮಂತ್ರಾಲಯ ಮಠದ ವಿದ್ವಾನ್ ಡಾ. ಅನಿಲ್ ಆಚಾರ್ಯ, ಪದ್ಮನಾಭಾಚಾರ್ಯ, ಸುಳಾದಿ ಹನುಮೇಶಾಚಾರ್ಯ ಪುರಂದರ ದಾಸರ ಕೀರ್ತನೆ, ಜೀವನ ಚರಿತ್ರೆ, ಪದ್ಯ ಸುಳಾದಿಗಳ ಬಗ್ಗೆ ಉಪನ್ಯಾಸ ನೀಡಿದರು.

ತಹಸೀಲ್ದಾರ್ ಶ್ರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್‌ ರಂಗಣ್ಙವರ್, ಮಠಾಧಿಕಾರಿ ಭೀಮಸೇನಾಚಾರ್ಯ,‌ ಪವನಾಚಾರ್ಯ, ಶ್ರೀನಿವಾಸಾಚಾರ್ಯ, ಗುರುರಾಜ್, ರಾಮಕೃಷ್ಣ, ಸಿಂಧನೂರು ದೇಸಾಯಿ ಇತರರಿದ್ದರು. ಮಂತ್ರಾಲಯ ಶ್ರೀ ಗುರುಸರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಕಾರ್ಯಕ್ರಮ ನಿರ್ವಹಿಸಿದರು.