ಸಾರಾಂಶ
ಗಂಗಾವತಿ ತಾಲೂಕಿನ ಆನೆಗೊಂದಿಗೆ ಆಗಮಿಸಿದ್ದ ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನವವೃಂದಾವನದಲ್ಲಿ ಇರುವ 9 ಯತಿವರೇಣ್ಯರ ವೃಂದಾವನಗಳಿಗೆ ನದಿ ತಟದಿಂದಲೇ ವಿಶೇಷ ಪೂಜೆ ಸಲ್ಲಿಸಿದರು.
ಗಂಗಾವತಿ: ತಾಲೂಕಿನ ಆನೆಗೊಂದಿಗೆ ಆಗಮಿಸಿದ್ದ ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನವವೃಂದಾವನದಲ್ಲಿ ಇರುವ 9 ಯತಿವರೇಣ್ಯರ ವೃಂದಾವನಗಳಿಗೆ ನದಿ ತಟದಿಂದಲೇ ವಿಶೇಷ ಪೂಜೆ ಸಲ್ಲಿಸಿದರು.
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟಿದ್ದರಿಂದ ನವವೃಂದಾವನ ಸುತ್ತಲೂ ನೀರು ತುಂಬಿಕೊಂಡಿದೆ. ಇದರಿಂದಾಗಿ ಶ್ರೀಗಳು ಆನೆಗೊಂದಿಯ ನದಿ ತೀರದಿಂದ ಪೂಜೆ ಸಲ್ಲಿಸಿದರು. ಆನಂತರ ಆನೆಗೊಂದಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಜಯತೀರ್ಥರ ಉತ್ತರಾರಾಧನೆ ನಿಮಿತ್ತ ವಿಶೇಷ ಪ್ರವಚನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ರಥೋತ್ಸವ: ಉತ್ತರಾರಾಧನೆ ಪ್ರಯುಕ್ತ ಶ್ರೀಮಠದ ಮುಂಭಾಗದ ವೇದಿಕೆಯಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಸುಪ್ರಭಾತ ಸೇವೆ ನಡೆಯಿತು. ಬಳಿಕ ಶ್ರೀ ಜಯತೀರ್ಥ ಗುರುಸಾರ್ವಭೌಮರು ರಚಿಸಿದ ಶ್ರೀಮನ್ ನ್ಯಾಯಸುಧಾ ಗ್ರಂಥದ ಮಹಾರಥೋತ್ಸವ ಮೂಲಕ ಆನೆಗುಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ಮಂಡಳಿ ಸದಸ್ಯರು ಕೋಲಾಟ, ನೃತ್ಯಗೀತೆಗಳನ್ನು ಪ್ರಸ್ತುತಪಡಿಸಿದರು.
ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ವಿದ್ವಾನ್ ಸುಳಾದಿ ಹನುಮೇಶ್ ಆಚಾರ್ಯ ಶ್ರೀಜಯತೀರ್ಥ ಕುರಿತು ಉಪನ್ಯಾಸ ನೀಡಿದರು. ಬಳಿಕ ಸಾಮೂಹಿಕ ಭಜನೆ ನಡೆಸಿಕೊಟ್ಟರು. ಸಂಜೆ ಗೆಜ್ಜಿಳ್ಳಿ ಭಜನಾ ಮಂಡಳಿಯಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.ಆನೆಗುಂದಿ ಮಠದ ಶಾಖಾ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ, ಸಂಜೀವ್ ಕುಲಕರ್ಣಿ, ರಾಮಕೃಷ್ಣ ಜಾಹಗೀರದಾರ, ಪವನಾಚಾರ್ಯ, ನರಸಿಂಹ ಆಚಾರ್ಯ, ವಿಜಯೀಂದ್ರ ಆಚಾರ್ಯ, ಶ್ರೀನಿವಾಸ್ ಆಚಾರ್ಯ, ವಿಜಯ್ ದೇಸಾಯಿ ಗೋತಗಿ ಇತರರಿದ್ದರು.