ಮೋದಿಗೆ ಶಕ್ತಿ ತುಂಬಲು ಶಕ್ತಿ ದೇವತೆಗೆ ಪೂಜೆ: ಮಂಗಳಾ ನವೀನ್

| Published : Mar 23 2024, 01:09 AM IST

ಸಾರಾಂಶ

ಪ್ರಸಕ್ತ ಲೋಕಸಭೆ ಚುನಾವಣೆಯು ಶಕ್ತಿಯ ಆರಾಧಕರೂ ಹಾಗೂ ಶಕ್ತಿಯನ್ನು ನಾಶ ಮಾಡುತ್ತೇವೆ ಎಂದು ಫಣ ತೊಟ್ಟಿರುವ ವ್ಯಕ್ತಿಗಳ ನಡುವೆ ನಡೆಯಲಿರುವ ಮಹಾಯುದ್ಧವಾಗಿದೆ. ದೇಶದ ಸಮಸ್ತ ಮಹಿಳೆಯರೂ ಕೂಡ ಈ ಬಾರಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತಾರೆ ಎಂಬ ಅಚಲವಾದ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಶಕ್ತಿ ದೇವತೆಗಳಿಗೆ ಮೊರೆ ಹೋಗಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವ ಸಲುವಾಗಿ ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ ಸತ್ಯನ್ ಹೇಳಿದರು.

ಜಿಲ್ಲಾ ಮಹಿಳಾ ಮೋರ್ಚಾದಿಂದ ನಗರದ ಶಕ್ತಿ ದೇವತೆ ಶ್ರೀಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಾತೃಶಕ್ತಿ, ನಾರಿಶಕ್ತಿ. ಮನುಷ್ಯ ಸೃಷ್ಟಿಗೆ ಕಾರಣವಾದ ಈ ಶಕ್ತಿಯನ್ನೇ ನಾಶ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವುದು ಬಾಲಿಶತನದಿಂದ ಕೂಡಿದೆ ಎಂದು ದೂರಿದರು.

ಪ್ರಸಕ್ತ ಲೋಕಸಭೆ ಚುನಾವಣೆಯು ಶಕ್ತಿಯ ಆರಾಧಕರೂ ಹಾಗೂ ಶಕ್ತಿಯನ್ನು ನಾಶ ಮಾಡುತ್ತೇವೆ ಎಂದು ಫಣ ತೊಟ್ಟಿರುವ ವ್ಯಕ್ತಿಗಳ ನಡುವೆ ನಡೆಯಲಿರುವ ಮಹಾಯುದ್ಧವಾಗಿದೆ. ದೇಶದ ಸಮಸ್ತ ಮಹಿಳೆಯರೂ ಕೂಡ ಈ ಬಾರಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತಾರೆ ಎಂಬ ಅಚಲವಾದ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಶಕ್ತಿ ದೇವತೆಗಳಿಗೆ ಮೊರೆ ಹೋಗುವುದಾಗಿ ತಿಳಿಸಿದರು.

ಬೇಟಿ ಬಚಾವೋ, ಬೇಟಿ ಪಡಾವೋ, ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಅನೇಕ ಕಾರ್ಯಕ್ರಮಗಳು, ಮಹಿಳಾ ಮೀಸಲಾತಿಗೆ ಬಿಜೆಪಿ ಸರ್ಕಾರ ಕೈಗೊಂಡ ದಿಟ್ಟ ಹೆಜ್ಜೆ, ತ್ರಿವಳಿ ತಲಾಖ್ ಎಲ್ಲರೂ ಕೂಡ ಸ್ತ್ರೀ ಕುಲದ ಒಳಿತಿಗಾಗಿ ನರೇಂದ್ರ ಮೋದಿ ಸರ್ಕಾರ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದರು.

ಶಕ್ತಿಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮಹಿಳಾ ಶಕ್ತಿ ಏನೆಂಬುದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲ. ಅದನ್ನು ಚುನಾವಣೆಯಲ್ಲಿ ತೋರಿಸಲಿದ್ದೇವೆ. ಬಿಜೆಪಿಯನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದರೊಂದಿಗೆ ನಾರಿ ಶಕ್ತಿ ಏನೆಂದು ತೋರಿಸುತ್ತೇವೆ ಎಂದರು.

ಮುಖಂಡರಾದ ಸಿಂಧು, ಶಿಲ್ಪ, ವಿಜಯಕುಮಾರಿ, ಮಂಜುಳಾ, ಸವಿತಾ, ಮಂಜುಳಾ, ಶೀಲಾ, ಹೇಮಾ, ಜಯಮಾಲ, ಮಧು, ಪವಿತ್ರ ಇತರರು ಹಾಜರಿದ್ದರು.