ಸಾರಾಂಶ
ನೂರಾರು ವರ್ಷಗಳ ಇತಿಹಾಸ । ಕನಕಾಚಲಪತಿ ಜಾತ್ರಾ ಸಂದರ್ಭದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಎಂ.ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿಬಡವರ ತಿರುಪತಿ, ದೇವಾಲಯಗಳ ತೊಟ್ಟಿಲು ಎಂಬ ಹೆಗ್ಗಳಿಕೆ ಪಡೆದಿರುವ ಕನಕಗಿರಿಯ ಶ್ರೀ ಕನಕಾಚಲಪತಿ ಜಾತ್ರಾ ಸಂದರ್ಭದಲ್ಲಿ ನಡೆಯುವ ದಾಸಪ್ಪನ ಕಾರ್ಯಕ್ರಮಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.
ಪಟ್ಟಣದಲ್ಲಿ ಬ್ರಾಹ್ಮಣ, ಕ್ಷತ್ರಿಯ, ರೆಡ್ಡಿ, ನಾಯಕ, ಕುರುಬ, ಗಂಗಾಮತ, ಲಿಂಗಾಯತ, ಗೊಲ್ಲ, ಕುಂಬಾರ ಸೇರಿ ನಾನಾ ಸಮುದಾಯದವರು ಕನಕಾಚಲಪತಿ ಜಾತ್ರೆ ಸಂದರ್ಭದಲ್ಲಿ ದಾಸಪ್ಪರನ್ನು ಮನೆಗೆ ಕರೆತಂದು ಪೂಜೆ ಹಾಗೂ ಶಂಖ ಹಾಗೂ ಜಾಗಟೆ ನಾದ ಮೊಳಗಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.ಭಕ್ತರು ದಾಸಪ್ಪನವರ ಗೋಪಾಳಕ್ಕೆ ದವಸ, ಧಾನ್ಯ ತುಂಬಿ ಶಂಖ, ಜಾಗಟೆಗಳಿಗೆ ಪೂಜೆ ಮಾಡಿ ಆರತಿ ಬೆಳಗುತ್ತಾರೆ. ಸಿಹಿಬೆಳೆ, ಕಡಬು, ಪಲ್ಲೆ, ಅನ್ನ-ಸಾಂಬಾರು, ಸಂಡಿಗೆ ತಯಾರಿಸಿ ನೈವೇದ್ಯ ಸಮರ್ಪಿಸುತ್ತಾರೆ. ಪೂಜಾ ವಿಧಿ-ವಿಧಾನಗಳು ಸಂಪನ್ನದ ಬಳಿಕ ದಾಸಪ್ಪನವರಿಂದ ಶಂಖ, ಜಾಗಟೆಯನ್ನು ಮೊಳಗಿಸುತ್ತಾ ವೆಂಕಟರಮಣ, ಕನಕಾಚಲಪತಿ ದೇವರನ್ನು ಸ್ಮರಿಸುತ್ತಾರೆ. ಈ ಕಾರ್ಯಕ್ರಮ ಜಾತ್ರಾ ಸಮಯದಲ್ಲಿ ನಡೆಯುವುದು ಮಾತ್ರ ವಿಶೇಷ.
ಶಂಖ, ಜಾಗಟೆ ಬಾರಿಸುವುದೇಕೆ?:ಶಾಸ್ತ್ರದಂತೆ ಶಂಖ ಹಾಗೂ ಜಾಗಟೆಯ ಸದ್ದಿನಿಂದ ಮನೆಯಲ್ಲಿರುವ ಪಿಶಾಚಿ, ಪೀಡೆಗಳು ತೊಲಗುತ್ತವೆ. ವರ್ಷಕ್ಕೊಮ್ಮೆ ಬರುವ ಜಾತ್ರಾ ಸಮಯದಲ್ಲಿ ಈ ಕಾರ್ಯಕ್ರಮ ಮಾಡುವುದರಿಂದ ಕುಟುಂಬಕ್ಕೆ ಒಳಿತಾಗಲಿದೆ ಎಂಬ ನಂಬಿಕೆಯಿಂದ ಕನಕಗಿರಿ ಪಟ್ಟಣದ ಗಲ್ಲಿ-ಗಲ್ಲಿಗಳಲ್ಲಿಯೂ ದಾಸಪ್ಪನವರು ಜಾಗಟೆ ಬಾರಿಸಿ, ಶಂಖ ಊದುವ ಮೂಲಕ ನೂರಾರು ವರ್ಷಗಳ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ.
ಯಾರು ಈ ದಾಸಪ್ಪನವರು?:ತಲೆತಲಾಂತರದಿಂದಲೂ ಗೊಲ್ಲ, ಯಾದವ ಕುಲಕ್ಕೆ ಸೇರಿದವರೆ ಈ ದಾಸಪ್ಪನವರಾಗಿದ್ದು, ಜಾತ್ರೆ ಸಂದರ್ಭಗಳಲ್ಲಿ ಹಾಗೂ ವರ್ಷವಿಡಿ ನಡೆಯುವ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲ ಆದ್ಯತೆ ದಾಸಪ್ಪನವರಿಗೆ ನೀಡಲಾಗುತ್ತಿದೆ. ಈ ಕಾರ್ಯಕ್ರಮ ಮುಗಿದ ಮೇಲೆ ಎಲ್ಲ ಕಾರ್ಯಗಳು ಸಾಂಗವಾಗಿ ನಡೆಯಲಿವೆ ಎನ್ನುವ ನಂಬಿಕೆಯಿಂದ ಇವರನ್ನು ಮೊದಲಿಗೆ ಆಹ್ವಾನಿಸಿ ಪೂಜಾ ಕಾರ್ಯವೆಲ್ಲ ಶ್ರದ್ಧೆಯಿಂದ ಮುಗಿಸುತ್ತಾರೆ. ಪ್ರತಿ ಧಾರ್ಮಿಕ ಕಾರ್ಯಕ್ಕೆ ದಾಸಪ್ಪನವರು ಪಾಲ್ಗೊಳ್ಳಬೇಕೆನ್ನುವ ಪದ್ದತಿಯೂ ಇದೆ. ಈಗಲೂ ದಾಸಪ್ಪನವರು ಎಲ್ಲ ಕಾರ್ಯಗಳಲ್ಲಿಯೂ ತಪ್ಪದೇ ಭಾಗವಹಿಸುತ್ತಾ ಬಂದಿದ್ದಾರೆ.