ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯ ಪೀಠಾರೋಹಣಕ್ಕೆ ಸಿದ್ಧರಾಗುತ್ತಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ನಡೆದ ಅಕ್ಕಿ ಮುಹೂರ್ತದಲ್ಲಿ ಅಷ್ಟ ಮಠಾಧೀಶರು ಭಾಗವಹಿಸಿ ಅವರನ್ನು ಆಶೀರ್ವದಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭ ಮಾತನಾಡಿದ ಶ್ರೀ ವೇದವರ್ಧನ ತೀರ್ಥರು, ಇದು ತಮ್ಮ ಪರ್ಯಾಯವಲ್ಲ, ಕೃಷ್ಣ ತಮ್ಮ ಮೂಲಕ ನಡೆಸುವ ಪರ್ಯಾಯ, ಎಲ್ಲ ಅಷ್ಟ ಮಠಾಧೀಶರು ಸಹಕಾರ ನೀಡಿ ಅದನ್ನು ನಡೆಸಿಕೊಡಬೇಕು ಎಂದು ಪ್ರಾರ್ಥಿಸಿದರು.ಕೃಷ್ಣಮಠಕ್ಕೆ ಬರುವ ಭಕ್ತರ ಜಠರಾಗ್ನಿ ರೂಪದ ದೇವರಿಗೆ ಅನ್ನ ಸಮರ್ಪಣೆ ಮಾಡುವುದಕ್ಕಾಗಿ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಅಕ್ಕಿ ಮುಹೂರ್ತವನ್ನು ನೆರವೇರಿಸಿದ್ದೇವೆ. ಕೃಷ್ಣನ ಪೂಜೆಯಿಂದ ಲೋಕ ಮತ್ತು ರಾಷ್ಟ್ರಕ್ಕೆ ಒಳಿತಾಗಬೇಕು ಎಂಬುದು ತಮ್ಮ ಆಶಯ ಎಂದರು.
ಸಂಪ್ರದಾಯ ತಪ್ಪಬಾರದು:ಅನ್ನದಾನ ಕೂಡ ದೇವರನ್ನು ಪೂಜಿಸುವ ನಮ್ಮ ಹಿರಿಯರು ಹಾಕಿಕೊಟ್ಟ ಒಂದು ಶ್ರೇಷ್ಟ ಸಂಪ್ರದಾಯ, ಅದನ್ನು ತಪ್ಪಬಾರದು. ಆದ್ದರಿಂದ ಅಕ್ಕಿ ಮುಹೂರ್ತಕ್ಕೆ ಬಹಳ ಮಹತ್ವ ಇದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಸಾಗರ ತೀರ್ಥರು ಹೇಳಿದರು.ಅಷ್ಟ ಮಠಾಧೀಶರು ಈ ಅಕ್ಕಿ ಮುಹೂರ್ತದಲ್ಲಿ ಭಾಗಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಶ್ರೀ ವೇದವರ್ಧನ ತೀರ್ಥರಿಗೆ ಕೃಷ್ಣನ ಪೂಜೆಯ ಅವಕಾಶ ಸಿಕ್ಕಿದ್ದು, ಅವರ ಸೌಭಾಗ್ಯ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ತಿಳಿಸಿದರು.ಅನ್ನದಾನಕ್ಕೆ ಹೆಸರಾದ ಉಡುಪಿಗೆ ದೇಶದ ಮೂಲೆಮೂಲೆಗಳಿಂದ ಬರುವ ಭಕ್ತರಿಗೆ ಕೃಷ್ಣನ ದರ್ಶನ ಮತ್ತು ಸಂತೃಪ್ತ ಭೋಜನ ನೀಡಬೇಕು. ಇದರಿಂದ ನಾಡಿಗೆ ಸುಭಿಕ್ಷೆಯಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.ಅನ್ನ ಎಂದರೆ ಪರಮಾತ್ಮನ ಇನ್ನೊಂದು ಹೆಸರು. ಅನ್ನಕ್ಕಾಗಿ ಅಂದರೆ ಕೃಷ್ಣನಿಗಾಗಿ ನಡೆಯುವ ಮುಹೂರ್ತ ಇದು. ಇಲ್ಲಿ ನಡೆಯುವ ಅನ್ನದಾನ ಅನ್ನನಾಮಕ ಭಗವಂತನ ಸೇವೆಯೇ ಆಗಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ತಿಳಿಸಿದರು.ಕೃಷ್ಣಮಠದ ನಿತ್ಯ ಉತ್ಸವದಲ್ಲಿ ಜನಸಾಮಾನ್ಯರು ಭಾಗವಹಿಸಬೇಕು ಎಂದು ಈ ಅಕ್ಕಿ ಮುಹೂರ್ತದ ಮೂಲಕ ಅಕ್ಕಿದಾನ ಮಾಡುವ ಅವಕಾಶವನ್ನು ಹಿರಿಯರು ಹಾಕಿಕೊಟ್ಟಿದ್ದಾರೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಹೇಳಿದರು.ಪಂಡರಾಪುರದ ವಿಠಲ ನಾದಬ್ರಹ್ಮ, ತಿರುಪತಿಯ ಶ್ರೀನಿವಾಸ ಕಾಂಚನಬ್ರಹ್ಮ, ಉಡುಪಿಯ ಕೃಷ್ಣ ಅನ್ನಬ್ರಹ್ಮ. ಇಲ್ಲಿ ನಡೆಯುವ ಅನ್ನದಾನವೇ ಕೃಷ್ಣಪ್ರಸಾದವಾಗಿದೆ ಎಂದು ಪಲಿಮಾರು ಮಠದ ಕಿರಿಯ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥರು ತಿಳಿಸಿದರು.