ಸಾರಾಂಶ
ಶರನ್ನವರಾತ್ರಿಯಲ್ಲಿ ನಾವು ಪ್ರತಿದಿನವೂ ಶಕ್ತಿ ಸ್ವರೂಪಿಣಿ ಯಾಗಿರುವ ನವದುರ್ಗೆರೆಯನ್ನು ಪೂಜಿಸಿ ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥಗಳು ಈಡೇರುವ ಜೊತೆಗೆ ಲೋಕದಲ್ಲಿ ಸುಖ, ಸಂತೋಷ, ಶಾಂತಿ ಹಾಗೂ ಸಮೃದ್ಧಿಯು ನೆಲೆಸಿ ಮಾನವರಾದ ನಾವು ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶರನ್ನವರಾತ್ರಿಯ ನವದುರ್ಗೆಯರ ಆರಾಧನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವ ಜೊತೆಗೆ ಸಮಾಜದಲ್ಲಿ ಶಾಂತಿ ಸಮೃದ್ಧಿಯು ನೆಲೆಸುತ್ತದೆ ಎಂದು ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.ತಾಲೂಕಿನ ಭೃಗು ಮಹರ್ಷಿಗಳ ತಪೋ ಭೂಮಿ ಹೇಮಗಿರಿ ಸುಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಬಿಜಿಎಸ್ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿರುವ ನವದುರ್ಗೆಯರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶರನ್ನವರಾತ್ರಿಯಲ್ಲಿ ನಾವು ಪ್ರತಿದಿನವೂ ಶಕ್ತಿ ಸ್ವರೂಪಿಣಿ ಯಾಗಿರುವ ನವದುರ್ಗೆರೆಯನ್ನು ಪೂಜಿಸಿ ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥಗಳು ಈಡೇರುವ ಜೊತೆಗೆ ಲೋಕದಲ್ಲಿ ಸುಖ, ಸಂತೋಷ, ಶಾಂತಿ ಹಾಗೂ ಸಮೃದ್ಧಿಯು ನೆಲೆಸಿ ಮಾನವರಾದ ನಾವು ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.ಮಹಾಶಕ್ತಿಯಾದ ಶ್ರೀಚಾಮುಂಡೇಶ್ವರಿ ತಾಯಿಯು ದುಷ್ಟನಾದ ಮಹಿಶಾಸುರನನ್ನು ಸಂಹರಿಸಿ ಲೋಕವನ್ನು ಕಾಪಾಡಿದ ಶುಭ ದಿವಸವೇ ವಿಜಯದಶಮಿಯಾದ್ದರಿಂದ ಶರನ್ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುವ ಮೂಲಕ ನಾವು ನಮ್ಮ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುತ್ತಾ ಬಂದಿದ್ದೇವೆ ಎಂದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟಕಹಳ್ಳಿ ಗಂಗಾಧರ್ ಮಾತನಾಡಿ, ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮೇಲೆ ಬೆಳಕು ಚೆಲ್ಲುವ ಧಾರ್ಮಿಕ ಆಚರಣೆಗಳು ನಮ್ಮ ಹಿರಿಯರಿಂದ ನಮಗೆ ಬಂದಿರುವ ಕೊಡುಗೆಯಾಗಿವೆ. ದೇವರು ಹಾಗೂ ಧರ್ಮದ ಮಾರ್ಗದಲ್ಲಿ ನಾವು ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವ ಜೊತೆಗೆ ನಾವು ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡ ಸಿಗುತ್ತದೆ ಎಂದರು.ಈ ವೇಳೆ ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷರಾದ ಬಳ್ಳೇಕೆರೆ ಮಂಜುನಾಥ್, ಮುಖಂಡರಾದ ಕಾಯಿ ಮಂಜೇಗೌಡ, ಲತಾ ಮಣಿ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.