ಸಾರಾಂಶ
ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ 29ರಂದು ಮಧ್ಯಾಹ್ನ 3.30ರಿಂದ ‘ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ’ ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ, ಉಡುಪಿ
ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ 29ರಂದು ಮಧ್ಯಾಹ್ನ 3.30ರಿಂದ ‘ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ’ ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ.ಈ ಬಗ್ಗೆ ಪರಿಷತ್‌ನ ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ತಾಲೂಕು ಸಮಿತಿ ಸಭೆ ಪರ್ಯಾಯ ಶ್ರೀ ಪುತ್ತಿಗೆ ಮಠದಲ್ಲಿ ನಡೆಯಿತು.
ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಮಾತನಾಡಿ, ಭಜನಾ ಪರಿಷತ್ ಕೇಂದ್ರ ಸಮಿತಿಯ ಮಾರ್ಗದರ್ಶನದಂತೆ ಪರಿಷತ್ ವತಿಯಿಂದ ನಡೆಸುವ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಭಜನಾ ತರಬೇತುದಾರೆ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಅವರು ‘ಸಹಸ್ರ ಕಂಠ ಗಾಯನ’ ಕಾರ್ಯಕ್ರಮದ ಪ್ರಯುಕ್ತ ಜ.5ರಿಂದ ಪ್ರತಿ ಭಾನುವಾರ ಅಪರಾಹ್ನ 3.30ಕ್ಕೆ ಉಡುಪಿಯ ಶ್ರೀ ಪುತ್ತಿಗೆ ಮಠದಲ್ಲಿ ನಡೆಯುವ ಭಜನಾ ತರಬೇತಿಯಲ್ಲಿ ಭಜನಾ ಮಂಡಳಿಗಳ ಸದಸ್ಯರು ಹಾಗೂ ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಉಡುಪಿ ಜಿಲ್ಲಾ ಯೋಜನಾಧಿಕಾರಿ ಸ್ವಪ್ನಾ ಪ್ರಕಾಶ್, ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ, ಶ್ರೀ ಪುತ್ತಿಗೆ ಮಠದ ರಘುಪತಿ ರಾವ್ ಕಿದಿಯೂರು, ಭಜನಾ ಮಂಡಳಿಯ ಸುಮನ ಆಚಾರ್ಯ ಉಪಸ್ಥಿತರಿದ್ದರು. ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ಸುಮಿತ್ರಾ ನಾಯ್ಕ್ ಪೆರಂಪಳ್ಳಿ ವಂದಿಸಿದರು.