ಹೊನ್ನಾಳಿಯಲ್ಲಿ ಶಮಿ ವೃಕ್ಷಕ್ಕೆ ಪೂಜೆ, ಬನ್ನಿ ವಿತರಣೆ

| Published : Oct 03 2025, 01:07 AM IST

ಸಾರಾಂಶ

ದುಷ್ಟಶಕ್ತಿಗಳ ವಿರುದ್ಧ ವಿಜಯದ ಸಂಕೇತವಾಗಿ ಇಡೀ ನಾಡಿನಾದ್ಯಂತ ಆಚರಿಸುವ ದಸರಾ ಹಬ್ಬದ 11ನೇ ದಿನವಾದ ಗುರುವಾರ ಹಿರೇಕಲ್ಮಠದ ಸ್ವಾಮೀಜಿ ಸೇರಿದಂತೆ ಪಟ್ಟಣದ ಅನೇಕ ದೇವರು ಪುಪ್ಪಗಳಿಂದ ಶೃಂಗರಿಸಲ್ಪಟ್ಟ ಪಲ್ಲಕ್ಕಿಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಹೊರವಲಯದಲ್ಲಿನ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಲಾಯಿತು.

ಹೊನ್ನಾಳಿ: ದುಷ್ಟಶಕ್ತಿಗಳ ವಿರುದ್ಧ ವಿಜಯದ ಸಂಕೇತವಾಗಿ ಇಡೀ ನಾಡಿನಾದ್ಯಂತ ಆಚರಿಸುವ ದಸರಾ ಹಬ್ಬದ 11ನೇ ದಿನವಾದ ಗುರುವಾರ ಹಿರೇಕಲ್ಮಠದ ಸ್ವಾಮೀಜಿ ಸೇರಿದಂತೆ ಪಟ್ಟಣದ ಅನೇಕ ದೇವರು ಪುಪ್ಪಗಳಿಂದ ಶೃಂಗರಿಸಲ್ಪಟ್ಟ ಪಲ್ಲಕ್ಕಿಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಹೊರವಲಯದಲ್ಲಿನ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಲಾಯಿತು.

ಬಳಿಕ ಸಹಸ್ರಾರು ಭಕ್ತರಿಗೆ ಸ್ವಾಮೀಜಿ ಆಶೀರ್ವಾದ ರೂಪದಲ್ಲಿ ಬನ್ನಿ ವಿತರಿಸುವ ಮೂಲಕ ವಿಜಯದಶಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು .

ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಶ್ರೀಮಠದಲ್ಲಿ ಸೆ.22ರಿಂದ ಅ.2ರವರೆಗೆ ಪ್ರತಿ ದಿನ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಆಚರಿಸಿಕೊಂಡು ಬಂದಿದ್ದು, ಹಿರೇಕಲ್ಮಠ ಸೇರಿದಂತೆ ಅನೇಕ ದೇವಾಲಯಗಳಲ್ಲಿ ದೇವಿ ಪುರಾಣ ವಾಚನ, ಅಷ್ಟ ದುರ್ಗೆಯರ ಪೂಜಾ ಕಾರ್ಯಕ್ರಮಗಳು ನಡೆದವು. ಹನ್ನೊಂದನೇ ದಿನ ಗುರುವಾರ ವಿಜಯದಶಮಿ ಹಿನ್ನೆಲೆ ಬನ್ನಿ ಮುಡಿಯುವ ಹಬ್ಬ ಅತ್ಯಂತ ಸಂಭ್ರಮ, ಸಡಗದಿಂದ ಆಚರಿಸಲ್ಟಟ್ಟಿತು.

ಪಟ್ಟಣದ ಹೊರವಲಯದಲ್ಲಿರುವ ಬನ್ನಿ ಮಂಟಪಕ್ಕೆ ಹಿರೇಕಲ್ಮಠದ ಡಾ,ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಪಟ್ಟಣದ ನೀಲಕಂಠೇಶ್ವರ, ಪಾಂಡುರಂಗ ಸೇರಿದಂತೆ ಅನೇಕ ದೇವರನ್ನು ವಿವಿಧ ಮಂಗಳ ವಾದ್ಯಗಳು ಪುರೋಹಿತರ ಮಂತ್ರ ಘೋಷಗಳು, ಎತ್ತಿನ ಗಾಡಿಗಳ ಮೆರವಣಿಗೆಯೊಂದಿಗೆ ಕರೆತರಲಾಯಿತು. ನಂತರ ಸ್ವಾಮೀಜಿ ಸಹಸ್ರಾರು ಭಕ್ತರ ಸಮ್ಮುಖ ಶಮಿ ವೃಕ್ಷಕ್ಕೆ ಪೊಜೆ ಸಲ್ಲಿಸಿ ಆಶೀರ್ವಾದ ರೂಪದಲ್ಲಿ ಸ್ಥಳದಲ್ಲಿ ಸೇರಿದ್ದ ಸಹಸ್ರಾರು ಭಕ್ತರಿಗೆ ಬನ್ನಿ ನೀಡಿದರು.

ಸ್ವಾಮೀಜಿಯಿಂದ ಬನ್ನಿ ಪಡೆದ ಜನರು ಪರಸ್ಪರ ಬನ್ನಿಯನ್ನು ವಿನಿಯಮ ಮಾಡಿಕೊಂಡು ನಂತರ ಜೋಳದ ದಂಡುಗಳೊಂದಿಗೆ ಮನೆಗಳಿಗೆ ತೆರಳಿ ಮಹಿಳೆಯರಿಂದ ಆರತಿಯೊಂದಿಗೆ ಸ್ವಾಗತ ಪಡೆದು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ತಂದೆ ತಾಯಿ, ಹಿರಿಯರು ಕಿರಿಯರು ಸ್ನೇಹಿತರು ಬಂಧಬಳಗದವರಿಗೆ ನಮಸ್ಕರಿಸಿ ಬನ್ನಿ ನೀಡಿ ಶುಭ ಕೋರಿದರು.

ಬನ್ನಿ ಮಂಟಪದಿಂದ ಮೆರವಣಿಗೆ ಮೂಲಕ ಸ್ವಾಮೀಜಿಯನ್ನು ಹೊತ್ತ ಪಲ್ಲಕ್ಕಿ ಹಾಗೂ ಪಟ್ಟಣದ ಅನೇಕ ದೇವರ ಪಲ್ಲಕ್ಕಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ಅಲ್ಲಿನ ಭಕ್ತರು ಹೂವು, ಹಣ್ಣುಗಳೊಂದಿಗೆ ಪೂಜೆ ಸಲ್ಲಿಸಿದರು.