ಸಾರಾಂಶ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಶಂಕರ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ವಿಧಿ ವಿಧಾನಗಳೊಂದಿಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತಿ ಸಂಗೀತದೊಂದಿಗೆ ಜರುಗಿದ ಯೋಗಿರಾಜ ಮಹಾರಾಜರ ಆರಾಧನೆ ಮಹೋತ್ಸವ ಸಂಪನ್ನಗೊಂಡಿತು.
ಬೆಳಗ್ಗೆ ಪ್ರಾತಃಸ್ಮರಣಿ ಕಾಕಡಾರತಿಯೊಂದಿಗೆ ಆರಂಭವಾದ ಕಾರ್ಯಕ್ರಮ ಗ್ರಾಮದ ಆಯ್ದ ಮನೆಗಳಲ್ಲಿ ಯೋಗಿರಾಜ ಭಾವಚಿತ್ರದೊಂದಿಗೆ ಭಕ್ತರು ಭೀಮಭಿಕ್ಷಾ ಕಾರ್ಯ ನಡೆಸಿದರು. ಭೀಕ್ಷೆ ನೀಡಿದ ಧನ, ಧಾನ್ಯ, ವಸ್ತ್ರಗಳನ್ನು ದೇವಸ್ಥಾನಕ್ಕೆ ತಲುಪಿಸಲಾಯಿತು.ಆ ನಂತರ ನಡೆದ ಅವಭೃತ ಸ್ನಾನದ ಕಾರ್ಯಕ್ರಮ ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕನ್ಯೆಯರ ಬಾವಿಯಲ್ಲಿಯ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ಯೋಗಿರಾಜರ ಪಾದುಕೆಯನ್ನು ಮೆರವಣಿಗೆಯಲ್ಲಿ ತರುವುದರ ಮೂಲಕ ಶಂಕರ ದೇವಸ್ಥಾನದಲ್ಲಿ ಭಕ್ತಾಧಿಗಳು ಪಲ್ಲಕ್ಕಿಯ ಕೆಳಗೆ ಮಲಗಿಕೊಳ್ಳುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಯೋಗಿರಾಜ ಮಹಾರಾಜ ಕೀ ಜೈ ಘೋಷಗಳು ಮೊಳಗಿದವು.
ಬೆಟಗೇರಿಯ ದತ್ತಣ್ಣ ತೆಂಬದಮನಿ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ವಿಧಿ ವಿಧಾನಗಳೊಂದಿಗೆ ನೆರವೇರಿತು. ಹುಬ್ಬಳ್ಳಿ ಹಾಗೂ ಗದಗ ನಗರದ ಪುರೋಹಿತರಿಂದ ಶಂಕರನ ಬುತ್ತಿ ಪೂಜಾ ಕಾರ್ಯಕ್ರಮವು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೀಪೋತ್ಸವ, ಶೇಜಾರತಿ, ಮಂತ್ರಪುಷ್ಪ, ಕಾರ್ತಿಕೋತ್ಸವ ಹಾಗೂ ಅಷ್ಟಾವಧಾನ ಸೇವೆ ಕಾರ್ಯಕ್ರಮಗಳು ನಡೆದವು.ಗಮನ ಸೆಳೆದ ಗಮಕ ವಾಚನ:
ಇನ್ನೂ ವೇದಿಕೆಯ ಕಾರ್ಯಕ್ರಮದಲ್ಲಿ ಕಳೆದ ಮೂರು ದಿನಗಳಿಂದ ಗುರುವಿನಹಳ್ಳಿ ವಿಶ್ವನಾಥರಾವ್ ಕುಲಕರ್ಣಿ ಅವರು ಕುಮಾರವ್ಯಾಸ ಭಾರತದ ಗಮಕ ವಾಚನದಲ್ಲಿ ಸಂಸಾರ, ಪ್ರೀತಿ, ದ್ವೇಷ, ಸ್ನೇಹ, ಸಂಸ್ಕಾರ, ಮಕ್ಕಳು, ದಾನ, ಧರ್ಮ, ವಿದ್ಯೆ, ಕರ್ಮ,ಬಾಲ್ಯ, ಯೌವನ, ವೃದ್ಯಾಪ್ಯ, ಅಧಿಕಾರ, ಅಂತಸ್ತು ಸೇರಿದಂತೆ ಮನುಷ್ಯನ ಜೀವಾವಧಿಯಲ್ಲಿ ಅಳವಡಿಸಿಕೊಳ್ಳಬಹುದಾದ ವಿಧುರ ನೀತಿಗಳ ವಾಚನ ಆಕರ್ಷಿಸಿತು.ಕೀರ್ತನ ಕೇಸರಿ ಕುರ್ತುಕೋಟಿಯ ದಿಗಂಬರ ಶಾಸ್ತ್ರೀ ಮಹಾಭಾರತದ ಕಥನದ ಕೀರ್ತನೆ ಗಮನ ಸೆಳೆಯಿತು. ರಾಜ್ಯ ಮಟ್ಟದ ಕಲಾವಿದರಾದ ಬೆಂಗಳೂರಿನ ಗೌರಿ ಕುಲಕರ್ಣಿ, ನರೇಗಲ್ಲದ ವೆಂಕಟೇಶ ಕುಲಕರ್ಣಿ, ಶ್ರೀಕಾಂತ ಹೂಲಿ, ಧಾರಾವಾಯಿ ನಟಿ ಹುಬ್ಬಳ್ಳಿಯ ಅರ್ಪಿತಾ ಜಹಗೀರದಾರ ಹಾಗೂ ರಾಜೇಶ್ವರಿ ಕುಲಕರ್ಣಿ ಭಕ್ತಿ ಸಂಗೀತವು ಮಂತ್ರ ಮುಗ್ಧರನ್ನಾಗಿಸಿತು. ಗದಗ ಹುಡ್ಕೋ ಕಾಲನಿಯ ಮಹಾಲಕ್ಷ್ಮೀ ಭಜನಾ ಮಂಡಳದ ಭಕ್ತಿಯ ಭಜನಾ ಹಾಡುಗಳು ಹಾಗೂ ಶಿಕ್ಷಕಿ ಭಾಗ್ಯಶ್ರೀ ಘಳಗಿ ಅವರು ರಚಿಸಿದ ದಾಸ ಶ್ರೇಷ್ಠ ಪುರಂದರ ದಾಸರು ನಾಟಕವು ಜನಮನ ಸೆಳೆಯಿತು.
ಉಮೇಶ ಪಾಟೀಲ, ಮಾಲತಿ ಕುಲಕರ್ಣಿ, ಮೋಹನ ಮಾಣಗೇರಿ ಸಂಗೀತ ಸೇವೆ ನೀಡಿದರು. ಧಾರವಾಡ, ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಬೆಂಗಳೂರು, ಗದಗ ಜಿಲ್ಲೆಯ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯೋಗಿರಾಜ ಭಕ್ತಿ ಮಂಡಳಿಯ ಅದ್ಯಕ್ಷ ನಾಗರಾಜ ಕುಲಕರ್ಣಿ, ಉಪಾದ್ಯಕ್ಷ ಆರ್.ಡಿ. ದೇಸಾಯಿ, ಕಾರ್ಯದರ್ಶಿ ಅಶೋಕ ಜೋಶಿ, ದತ್ತಾತ್ರೇಯ ಜೋಶಿ, ಆರ್.ಜಿ. ಕುಲಕರ್ಣಿ, ರಾಜಶೇಖರ ಘಳಗಿ, ಜಿ.ಜಿ. ಕುಲಕರ್ಣಿ, ಗೋಪಾಲಭಟ್ಟ ಜೋಶಿ, ಡಿ.ಆರ್, ಕುಲಕರ್ಣಿ, ಸಂಜೀವ ಘಳಗಿ ಸೇರಿದಂತೆ ಗಣ್ಯರು, ಹಿರಿಯರು, ಯುವಕರು, ಮಹಿಳೆಯರು ಇದ್ದರು.