ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮನುಷ್ಯನ ದೇಹವೇ ದೇವಾಲಯ, ಶಿರವೇ ಕಳಸ. ಈ ಭಾವನೆಗೆ ಜೀವ ತುಂಬಿದವರು ಬಸವಣ್ಣ. ದೇವಾಲಯಕ್ಕೆ ಹೋಗುವುದೇ ಧರ್ಮವಲ್ಲ. ಇಷ್ಟಲಿಂಗವೇ ಶಾಶ್ವತ ದೇವಾಲಯ. ಪೂಜಾರಿ ಮಾಡಿದ ಪೂಜೆಯ ಬದಲು ಪ್ರತಿಯೊಬ್ಬರೂ ತಾವೇ ಮಾಡುವ ಪೂಜೆಯೇ ನಿಜವಾದ ಧರ್ಮಾಚರಣೆ. ಇದು ಬಸವಣ್ಣನವರು ಕೊಟ್ಟ ಸಂದೇಶ ಎಂದು ಗದಗದ ಯಡಿಯೂರು ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಮಠಾಧೀಶರಾದ ಶ್ರೀ ಡಾ. ತೊಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ವಿಶ್ವಗುರು, ಜಗಜ್ಯೋತಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಹವೇ ದೇಗುಲ. ಶಿರವೇ ಒಂದು ಕಳಸ, ಈ ಪ್ರಚಾರಕ್ಕಾಗಿಯೇ ಬಸವ ಸಂಸ್ಕೃತಿಯ ಅಧ್ಯಯನ ಹೊರಟಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ನಾವು ಹೆಚ್ಚೆಚ್ಚು ಪ್ರಚಾರ ಮಾಡಿದರೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿಯುತ್ತದೆ. ದೇವಾಲಯಕ್ಕೆ ಹೋಗುವ ಸಂಖ್ಯೆ ಕಡಿಮೆ ಆಗಲು ನಾವು ಜಾಗೃತಿ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮನೆ ಮನೆ ಒಳಗೆ ಜಾಗೃತಿ ಮಾಡುವ ಅವಶ್ಯಕತೆ ಇದೆ. ಇಷ್ಟಲಿಂಗವನ್ನು ಬಸವಣ್ಣನವರು ಕೊಟ್ಟಿದ್ದು, ಪೂಜಾರಿ ಪೂಜೆ ಮಾಡಿದರೆ ನಿಮಗೆ ಪ್ರಯೋಜನವಿಲ್ಲ. ನಾವು ಯಾವಾಗ ಬೇಕು ಅವಾಗ ಪೂಜೆ ಮಾಡಬಹುದು. ಕೊರೋನಾ ಸಮಯದಲ್ಲಿ ಎಲ್ಲ ದೇವಾಲಯಗಳ ಬಾಗಿಲುಗಳು ಮುಚ್ಚಿದ್ದಾಗಲೂ, ಜನರ ಹೃದಯದಲ್ಲಿದ್ದ ಇಷ್ಟಲಿಂಗವೇ ತೆರೆದಿತ್ತು. ಬಸವಣ್ಣನವರ ದಾರಿ ಅದು ರಾಜ ಮತ್ತು ಸತ್ಯದ ಮಾರ್ಗವಾಗಿತ್ತು. ಸಮಾನ ಸಮಾಜವನ್ನು, ಸಮಾನತೆಯನ್ನು ಸ್ಥಾಪಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಮನುಷ್ಯರೆಲ್ಲರೂ ಒಂದೆ ಎಂಬುದರ ಸಂದೇಶ ಕೊಡಬೇಕಾಗಿತ್ತು. ಇದರಿಂದಲೇ ಜಾತಿ ಜಾತಿ ನಡುವೆ ಸಾಮರಸ್ಯ ಸಾಧಿಸಲು ಮುಂದಾದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸ್ವಾಮೀಜಿಗಳಿಗೆ ತತ್ವ ಸಂಬಂಧಿ ಹಲವಾರು ಪ್ರಶ್ನೆಗಳನ್ನು ಕೇಳಿದರು.
ಇಂದಿನ ಯುಗದಲ್ಲಿ ಬಸವಣ್ಣನವರ ಸಂದೇಶ ಹೇಗೆ ಪ್ರಸ್ತುತ, ಜಾತಿ ಭೇದ ನಿವಾರಣೆಗೆ ಏನು ಮಾಡಬೇಕು ಎಂಬಂತಹ ಪ್ರಶ್ನೆಗಳಿಗೆ ಸ್ವಾಮೀಜಿಗಳು ತಾಳ್ಮೆಯಿಂದ ಉತ್ತರಿಸಿ, ಸತ್ಯ ಮತ್ತು ಧರ್ಮದ ಮಾರ್ಗವೇ ಸಮಾಜಕ್ಕೆ ಬೆಳಕು ಎಂದು ತಿಳಿಸಿದರು.ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಅನುಭವ ಮಂಟಪವನ್ನು ೧೨ನೇ ಶತಮಾನದಲ್ಲಿ ದಯಪಾಲಿಸಿದವರು ಬಸವಣ್ಣನವರು. ಈ ಪ್ರಪಂಚದ ಜನಸಂಖ್ಯೆ ೮೫೦ ಕೋಟಿ ಇದ್ದು, ಅದರಲ್ಲಿ ಭಾರತದ ನಮ್ಮ ಜನಸಂಖ್ಯೆ ೧೫೦ ಕೋಟಿ ಇದೆ. ಒಂದು ಗಟ್ಟಿತನದ ಪ್ರಜಾಪ್ರಭುತ್ವ ಎಂಬುದು ತಳಹದಿಗೆ ಬಸವೇಶ್ವರರ ಆಶೀರ್ವಾದ ನಮ್ಮೆಲ್ಲರಿಗೂ ಕೂಡ ಅವಕಾಶವಾಗಿದೆ. ಶ್ರೀ ಮಠಗಳ ಆಶೀರ್ವಾದದಿಂದ ಧರ್ಮದ ಜಾಗೃತಿ, ಸಾಮಾಜಿಕ ಪ್ರಗತಿ ಆಗಿದ್ದು, ಶೈಕ್ಷಣಿಕ ಪ್ರಗತಿಯಾಗಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ ಎಂದರೆ ಇಂತಹ ಪರಮಪೂಜ್ಯರ ಆಶೀರ್ವಾದದಿಂದ ಮಾತ್ರ ಎಂದರು.
ಇಂತಹ ಮಹತ್ವವಾದ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಕ್ರಮ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಬಸವೇಶ್ವರರ ಸಂದೇಶಗಳನ್ನು ತಿಳಿಸಬೇಕಾಗಿದ್ದು, ಶ್ರೀ ಬಸವೇಶ್ವರರ ಪುತ್ಥಳಿಯನ್ನು ಹಾಸನದಲ್ಲಿ ಕೂಡ ನಿರ್ಮಾಣ ಮಾಡಲು ಶಾಸಕರಾದ ಎಚ್.ಪಿ. ಸ್ವರೂಪ್ ಕೂಡ ಚಿಂತನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲೂ ಕೂಡ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿ ಅನಾವರಣ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಶಕ್ತಿ ಬಂದಂತಾಗಿದೆ. ಮಹಾಲಯ ಅಮಾವಾಸ್ಯೆ ವಿಶೇಷ ದಿನದಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಸಾವಿರಾರು ಜನರು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು.
ವಿದ್ಯಾರ್ಥಿಗಳಿಂದ ಕೇಳಿದ ಪ್ರತಿಯೊಂದು ಪ್ರಶ್ನೆಗೂ ಸ್ವಾಮೀಜಿಗಳಿಂದ ಬಂದ ಉತ್ತರ ಸಭಿಕರ ಮನಸ್ಸಿನಲ್ಲಿ ಸ್ಫೂರ್ತಿಯ ಅಲೆಗಳನ್ನು ಎಬ್ಬಿಸಿತು. ಇದಕ್ಕೆ ಮೊದಲು ಬಸವಣ್ಣನವರ ರಥ ಯಾತ್ರೆ ಆಗಮಿಸಿದಾಗ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು.ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಸಾಣೇನಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗುರುಬಸವ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ, ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ, ಶ್ರೀ ಜಯಚಂದ್ರಶೇಖರ ಮಹಾಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ನವೀಲೆ ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಯು. ಬಸವರಾಜು, ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.