ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ನಿರ್ಬಂಧಗಳ ನಡುವೆ ಜಿಲ್ಲಾಕೇಂದ್ರ ರಾಮನಗರದಲ್ಲಿ ಶ್ರೀರಾಮನ ನಾಮಸ್ಮರಣೆ ಅತ್ಯಂತ ಭಕ್ತಿ ಭಾವದಿಂದ ನಡೆಯಿತು.ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ವೇಳೆ ನಾಗರಿಕರು ಜೈ ಶ್ರೀರಾಮ್ ಘೋಷಣೆಯನ್ನು ಮೊಳಗಿಸಿ ತಮ್ಮ ಭಕ್ತಿ ಸಮರ್ಪಿಸಿದರು.ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಅಚರಣಾ ಸಮಿತಿಯಿಂದ ಹಲವಾರು ಕಾರ್ಯಕ್ರಮಗಳು ನಡೆದವು. ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದ ಬಳಿ ಶ್ರೀರಾಮ, ಸೀತಾ, ಲಕ್ಷ್ಮಣ ಸಮೇತ ಉತ್ಸವ ಮೂರ್ತಿಯನ್ನು ಗರುಡವಾಹನದ ಮೇಲಿರಿಸಿ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯಕ್ಕೆ ಕರೆತರಲಾಯಿತು. ಉತ್ಸವ ಮೂರ್ತಿಯನ್ನು ಬಗೆಬಗೆಯ ಹೂವುಗಳಿಂದ ಮತ್ತು ವಿಶೇಷವಾಗಿ ಸಂಪೂರ್ಣ ಏಲಕ್ಕಿಯಿಂದಲೇ ತಯಾರಿಸಿದ್ದ ಹಾರದೊಂದಿಗೆ ಸಿಂಗರಿಸಿದ್ದು ವಿಶೇಷವಾಗಿತ್ತು.
ಶ್ರೀರಾಮನ ಉತ್ಸವ ಮೂರ್ತಿಗೆ ಶೋಡಷೋಪಚಾರ ಪೂಜೆಯನ್ನು ನೆರೆವೇರಿಸಲಾಯಿತು. ನಂತರ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಶ್ರೀರಾಮ, ಸೀತೆ, ಆಂಜನೇಯ ವೇಷ ತೊಟ್ಟಿದ್ದ ಮಕ್ಕಳು ಪ್ರದರ್ಶನ ನೀಡಿದರು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆರೆವೇರಿತು.ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಬೃಹತ್ ಎಲ್.ಇ.ಡಿ ಪರದೆಗಳ ಮೂಲಕ ಬಿತ್ತರಿಸುವ ವ್ಯವಸ್ಥೆ ಏರ್ಪಡಿಸಲಾಗಿತ್ತು. ನೂರಾರು ಮಂದಿ ನಾಗರೀಕರು ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಮಧ್ಯಾಹ್ನ ಸುಮಾರು ೩೦೦೦ಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಕೇಸರಿಬಾತ್, ಪಲ್ಯ, ಫಲಾವ್, ಅನ್ನ ಸಾಂಬರ್, ಮಜ್ಜಿಗೆ ಊಟ ಬಡಿಸಲಾಯಿತು. ಸೋಮವಾರ ಸಂಜೆ ವರೆಗೆ ಎಂ.ಜಿ.ರಸ್ತೆ, ಮಂಡಿಪೇಟಿ, ಮುಖ್ಯರಸ್ತೆಗಳಲ್ಲಿ ಬಹುತೇಕ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ವ್ಯಾಪಾರ ಸ್ಥಗಿತಗೊಳಿಸಿ ಶ್ರೀರಾಮ ಪ್ರಾಣಪ್ರತಿಷ್ಠಾಪನಾ ಆಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದ ಬಳಿ ದೀಪೋತ್ಸವದಲ್ಲಿ ನೂರಾರು ನಾಗರಿಕರು ಭಾಗವಹಿಸಿದ್ದರು. ವಿವಿಧ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಾಸಕ ಇಕ್ಬಾಲ್ ಹುಸೇನ್ ಭೇಟಿ :ಎಂ.ಜಿ.ರಸ್ತೆಯಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಅಚರಣಾ ಸಮಿತಿಯಿಂದ ಆಯೋಜಿಸಲಾಗಿದ್ದ ಅನ್ನಸಂತರ್ಪಣೆಯ ಸ್ಥಳಕ್ಕೆ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು, ನಗರಸಭೆ ಉಪಾಧ್ಯಕ್ಷ ಸೋಮಶೇಖರ್ (ಮಣಿ), ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಸಾರ್ವಜನಿಕ ವಲಯದ ಗಣ್ಯರು ಭೇಟಿ ನೀಡಿದ್ದರು. ಶಾಸಕ ಇಕ್ಬಾಲ್ ಹುಸೇನ್ ಕೇಸರಿ ಶಾಲು ಧರಿಸಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ನಂತರ ಪ್ರಸಾದ ಸ್ವೀಕರಿಸಿದರು.
--------------------------------ಬಾಕ್ಸ್ ....
ರಾಮನಗರದಲ್ಲಿ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾರ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ನಾಗರೀಕರು ಬಯಸಿದ್ದರು. ಆದರೆ ಪೊಲೀಸ್ ಮತ್ತು ಸ್ಥಳೀಯ ಆಡಳಿತದ ನಿರ್ಬಂಧಗಳಿಂದಾಗಿ ಜನರ ಬಯಕೆ ಈಡೆರಲಿಲ್ಲ. ಹೀಗಾಗಿ ಇದೇ ಜನವರಿ 26ರಂದು ನಗರದಲ್ಲಿ ಸೀತಾ-ರಾಮ ಕಲ್ಯಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಅಚರಣಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.------------------------
22ಕೆಆರ್ ಎಂಎನ್ 5,6,7.ಜೆಪಿಜಿ5.ರಾಮನಗರದ ಎಂ.ಜಿ.ರಸ್ತೆಯಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಅಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಭಾಗಿಯಾಗಿದ್ದರು.
6.ರಾಮನಗರದ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗ ಶ್ರೀ ರಾಮ ದೇವರಿಗೆ ಶೋಡಶೋಪಚಾರ ಪೂಜೆ ನೆರವೇರಿಸಲಾಯಿತು.7.ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಬೃಹತ್ ಎಲ್.ಇ.ಡಿ ಪರದೆಗಳಲ್ಲಿ ಭಕ್ತರು ವೀಕ್ಷಿಸಿದರು.
--------------------------------