ಯಕ್ಷಪಂಚಮಿ ಮೂಲಕ ಕೃಷ್ಣನ ಅರ್ಚನೆ: ಡಾ. ತಲ್ಲೂರು

| Published : Oct 25 2025, 01:02 AM IST

ಸಾರಾಂಶ

ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು, ದ್ಯುತಿ ಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಸಹಕಾರದಿಂದ ರಾಜಾಂಗಣದಲ್ಲಿ ಐದು ದಿನಗಳ, ಯಕ್ಷ ಪಂಚಮಿ ಉದ್ಘಾಟನೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಸಿದ್ಧ ಹಟ್ಟಿಯಂಗಡಿ ಮೇಳದವರು ಕಳೆದ 6 ವರ್ಷಗಳಿಂದ ಉಡುಪಿ ಕೃಷ್ಣಮಠದಲ್ಲಿ 5 ದಿನಗಳ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. ಶ್ರೀ ಕೃಷ್ಣನಿಗೆ ಮೇಳದವರು ಯಕ್ಷಾರ್ಚನೆ ನಡೆಸುತ್ತಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶೀಪಾದರ ಆಶೀರ್ವಾದದೊಂದಿಗೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು, ದ್ಯುತಿ ಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಸಹಕಾರದಿಂದ ರಾಜಾಂಗಣದಲ್ಲಿ ನಡೆಯುತ್ತಿರುವ ಐದು ದಿನಗಳ, ಯಕ್ಷ ಪಂಚಮಿ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಪುತ್ತಿಗೆ ಮಠದ ಸಾಂಸ್ಕೃತಿಕ ವ್ಯವಸ್ಥಾಪಕ ರಮೇಶ್ ಭಟ್ ಸಹಜ ನಿಸ್ವಾರ್ಥ ಸೇವಾ ರೂಪದಲ್ಲಿ ಏಳು ವರ್ಷಗಳ ನಿರಂತರ ಸೇವೆ ನಿಜವಾಗಿ ಶ್ರೀಕೃಷ್ಣನ ಆರಾಧನೆಯಾಗಿದೆ. ಇದು ಕೃಷ್ಣನಿಗೆ ಪ್ರಿಯವಾದುದರಿಂದ ಮೇಳಕ್ಕೆ ವರ್ಷದಿಂದ ವರ್ಷಕ್ಕೆ ಪ್ರಗತಿಯೂ ಲಭಿಸಿದೆ ಎಂದು ಹೇಳಿದರು. ಹಟ್ಟಿಯಂಗಡಿ ಮೇಳದ ಯಜಮಾನ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ಮಾತನಾಡಿ, ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಆರಂಭಿಸಿದಂದಿನಿಂದ ಇಂದಿನವರೆಗೂ ಬಹಳ ಸಂತೋಷದಿಂದ ಯಕ್ಷ ಪಂಚಮಿಯನ್ನು ಕಲಾವಿದರೂ ಆಚರಿಸಿಕೊಂಡು ಬರುತ್ತಿದ್ದಾರೆ. ಶ್ರೀ ಕೃಷ್ಣನ ಕೃಪೆಯಿಂದ ಇದು ಹೀಗೆಯೇ ನಿರಂತರವಾಗಲೆಂದು ಪ್ರಾರ್ಥಿಸುತ್ತೇವೆ ಎಂದರು.