ಕನ್ನಡಪ್ರಭ ವಾರ್ತೆ ಮಹಾಲಿಂಗಪುರಗ್ರಾಮೀಣ ಭಾಗಗಳಲ್ಲಿ ಅನಾದಿಕಾಲದಿಂದಲೂ ಆಡುತ್ತಾ ಬಂದಿರುವ ದೇಶದ ಸಾಂಸ್ಕೃತಿಕ ಕ್ರೀಡೆಯಾದ ಕುಸ್ತಿ ಬರೀ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವ ಕ್ರೀಡೆಯಾಗಿರದೆ, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕ್ರೀಡೆಯಾಗಿ ಬೆಳೆದುಬಂದಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಗ್ರಾಮೀಣ ಭಾಗಗಳಲ್ಲಿ ಅನಾದಿಕಾಲದಿಂದಲೂ ಆಡುತ್ತಾ ಬಂದಿರುವ ದೇಶದ ಸಾಂಸ್ಕೃತಿಕ ಕ್ರೀಡೆಯಾದ ಕುಸ್ತಿ ಬರೀ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವ ಕ್ರೀಡೆಯಾಗಿರದೆ, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕ್ರೀಡೆಯಾಗಿ ಬೆಳೆದುಬಂದಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಹೇಳಿದರು. ಸಮೀಪದ ಚಿಮ್ಮಡ ಗ್ರಾಮದ ಭೀಮ ನಗರ(ಜನತಾ ಪ್ಲಾಟ್)ದಲ್ಲಿ 2023-24ನೇ ಸಾಲಿನ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಹತ್ತು ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಗರಡಿಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗರಡಿಮನೆ ಎಂದರೆ ಶಿಸ್ತು, ಸಂಯಮ, ದೈಹಿಕ ಹಾಗೂ ಮಾನಸಿಕವಾಗಿ ಸದೃಢತೆ ಪಡೆಯುವ ಶಾಲೆಯಾಗಿದ್ದು, ಸ್ಪರ್ಧಾತ್ಮಕ ಮನೋಭಾವವನ್ನು ಗಟ್ಟಿಗೊಳಿಸಿಕೊಳ್ಳಲು ಪ್ರತಿಯೊಬ್ಬ ಯುವಕ ಇದರ ಸಹಾಯ ಪಡೆದುಕೊಂಡು ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬೇಕಿದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ತೇರದಾಳ ಮತಕ್ಷೇತ್ರ ಕುಸ್ತಿ ಕ್ರೀಡೆಗೆ ಹೆಸರುವಾಸಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಈ ಭಾಗದ ಕುಸ್ತಿಪಟುಗಳು ಮಿಂಚುತಿದ್ದಾರೆ. ಗ್ರಾಮದಲ್ಲಿ ಈಗಾಗಲೇ 2 ಗರಡಿ ಮನೆಗಳಿದ್ದು ಪರಸ್ಪರ ಸಹಕಾರದೊಂದಿಗೆ ಸಾಂಸ್ಕೃತಿಕ ಕ್ರೀಡೆಯಾಗಿರುವ ಕುಸ್ತಿ ಕ್ರೀಡೆಯಲ್ಲಿ ಆಸಕ್ತಿಯಿಂದ ಆಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.

ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಅಶೋಕ ಚಿಮ್ಮಡ, ಅಂಬೇಡ್ಕರ ಸಂಘದ ಅಧ್ಯಕ್ಷರಾದ ದಶರಥ ಗೋವಿಂದಗೋಳ, ಪ್ರಭು ದೊಡವಾಡ, ಭೀಮು ಶೀಡ್ಲೆವ್ಗೋಳ ಇತರರು ಇದ್ದರು, ತೇರದಾಳ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.