ಜಗದಂಬಾ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ ಕಲರವ

| Published : Feb 14 2024, 02:17 AM IST

ಸಾರಾಂಶ

ಘಮಸುಬಾಯಿ ತಾಂಡಾದಲ್ಲಿ ನಡೆದ ಅಂತಾರಾಜ್ಯ ಪಂದ್ಯಾವಳಿಗೆ ಶಾಸಕ ಪ್ರಭು ಚವ್ಹಾಣ್‌ ಚಾಲನೆ ನೀಡಿದರು. ವಿವಿಧ ವಿಭಾಗಗಳಲ್ಲಿ ವಿಜೇತರಾದ ಕುಸ್ತಿಪಟುಗಳಿಗೆ ಶಾಸಕರು ಶಾಲು ಹೊದಿಸಿ, ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.

ಕನ್ನಡಪ್ರಭ ವಾರ್ತೆ ಔರಾದ್‌

ಇಚ್ಛಾಪೂರ್ತಿ ಮಾತಾ ಜಗದಂಬಾ ಜಾತ್ರಾ ಮಹೋತ್ಸವದ ನಿಮಿತ್ತ ಘಮಸುಬಾಯಿ ತಾಂಡಾ ಬೋಂತಿಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಜ್ಯ ಕುಸ್ತಿ ಪಂದ್ಯಾವಳಿ ಕಣ್ಮನ ಸೆಳೆಯಿತು.

ವಿವಿಧ ವಿಭಾಗಗಳಲ್ಲಿ ವಿಜೇತರಾದ ಕುಸ್ತಿಪಟುಗಳಿಗೆ ಶಾಸಕ ಪ್ರಭು ಚವ್ಹಾಣ್‌ ಶಾಲು ಹೊದಿಸಿ, ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.

ಅಂತಿಮ ಪಂದ್ಯಾವಳಿಯಲ್ಲಿ ಪುಣೆಯ ಪ್ರಸಾದ್‌ ಶಿಂಧೆ ಹಾಗೂ ಮಿರಜ್‌ ಸೋಲಾಪೂರ ಸುಮಾರು ಒಂದು ಗಂಟೆವರೆಗೆ ಸೆಣಸಾಡಿದರು. ಕೊನೆಯವರೆಗೆ ಡ್ರಾನೊಂದಿಗೆ ಆಟ ಮುಕ್ತಾಯವಾಯಿತು. ಇದಕ್ಕೂ ಮುನ್ನ ನಡೆದ 5 ಸಾವಿರ ಬಹುಮಾನ ವಿಭಾಗದ ಪಂದ್ಯಾವಳಿಯಲ್ಲಿ ಉದಗೀರನ ಆಯುಬ್ ಶೇಖ್ ಹಾಗೂ ಗಂಗಾಧರ ಅಹ್ಮದಾಪೂರ ಅವರ ನಡುವೆ ತೀವ್ರ ಸ್ಪರ್ಧೆ ನಡೆಯಿತು. ಕೊನೆಗೆ ಇಬ್ಬರಿಗೂ ಸಮಾನ ಅಂಕಗಳನ್ನು ನೀಡಿ ಡ್ರಾ ಘೋಷಿಸಲಾಯಿತು.

ಕರ್ನಾಟಕವಲ್ಲದೇ ಮಹಾರಾಷ್ಟ್ರ ಹಾಗೂ ತೆಲಂಗಾಣಾ ರಾಜ್ಯದಿಂದಲೂ ನೂರಾರು ಕುಸ್ತಿಪಟುಗಳು ಆಗಮಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಮಕ್ಕಳು, ಯುವಕರು ಕುಸ್ತಿಯಲ್ಲಿರುವ ತಮ್ಮ ಕೌಶಲಗಳನ್ನು ಪ್ರದರ್ಶಿಸಿ ಕ್ರೀಡಾಸಕ್ತರನ್ನು ರಂಜಿಸಿದರು.

ವಿವಿಧ ಗ್ರಾಮಗಳಿಂದ ಕುಸ್ತಿ ವೀಕ್ಷಣೆಗೆ ಆಗಮಿಸಿದ ಜನತೆ ಅಖಾಡದಲ್ಲಿನ ಕುಸ್ತಿ ಪಟುಗಳ ಆಟವನ್ನು ವೀಕ್ಷಿಸಿ ಸಿಳ್ಳೆ, ಚಪ್ಪಾಳೆ ಮುಖಾಂತರ ಆಟಗಾರರಲ್ಲಿ ಸ್ಫೂರ್ತಿ ತುಂಬಿದರು.

ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಕುಸ್ತಿ ನಮ್ಮ ದೇಶದ ಕ್ರೀಡೆಯಾಗಿದೆ. ಇಂತಹ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು. ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಇಚ್ಛಾಪೂರ್ತಿ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ ಎಂದರು.

ಗಮನಸೆಳೆದ ವಿಶೇಷಚೇತನ ಕುಸ್ತಿ ಪಟು:

ಮಹಾರಾಷ್ಟ್ರ ರಾಜ್ಯದ ಕರ್ಖೇಲ್ ಗ್ರಾಮದಿಂದ ಆಗಮಿಸಿದ್ದ ಕುಸ್ತಿಪಟು ಗಣೇಶ ದೇಶಮುಖ ಒಂದೇ ಕೈಯಿದ್ದರೂ ಸಾಮಾನ್ಯ ಕುಸ್ತಿಪಟುವಿನೊಂದಿಗೆ ಸ್ಪರ್ಧಿಸಿ ಜಯ ಸಾಧಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದರು. ಹುಲ್ಯಾಳ ಗ್ರಾಮದ ಮಹಿಳಾ ಕುಸ್ತಿಪಟುಗಳಾದ ಕಲ್ಪನಾ ಪವಾರ ಹಾಗೂ, ಪಲ್ಲವಿ ಪವಾರ ಅವರು ಪುರುಷ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಜಯ ಗಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಮುಖಂಡರಾದ ಅನಂತ ಬಿರಾದಾರ, ಔರಾದ್‌ (ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಮಾರುತಿ ಚವ್ಹಾಣ್‌, ಲಾಲು ನಾಯಕ, ಮಾರುತಿ ಪವಾರ, ಪ್ರತೀಕ್‌ ಚವ್ಹಾಣ್‌, ಶಿವರಾಜ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಅಮಿತ್ ರಾಠೋದ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.