ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ/ಶಹಾಪುರಆನಂದ ಸೌದಿ/ಮಲ್ಲಯ್ಯ ಪೋಲಂಪಲ್ಲಿ
ಕಳೆದ ನ. 25 ರಂದು, ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಸರ್ಕಾರಿ ಗೋದಾಮಿನಿಂದ ನಾಪತ್ತೆಯಾದ, ಅಂದಾಜು ₹2 ಕೋಟಿ ಮೌಲ್ಯದ ಅನ್ನಭಾಗ್ಯ ಪಡಿತರ ಅಕ್ಕಿ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ಗುರುಮಠಕಲ್‌ನ ಮಣಿಕಂಠ ರಾಠೋಡ್‌ನನ್ನು ಕಲಬುರಗಿಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಬಂಧಿಸಿದ್ದಾರೆ.ಸುಮಾರು 6088.97 ಕ್ವಿಂಟಲ್, ಅಂದರೆ 50 ಕೆಜಿ ತೂಕದ 12,154 ಚೀಲಗಳುಳ್ಳ 2 ಕೋಟಿ 66 ಲಕ್ಷ 33 ಸಾವಿರದ 900 ರುಪಾಯಿಗಳಷ್ಟು ಮೌಲ್ಯದ ಅನ್ನಭಾಗ್ಯ ಅಕ್ಕಿ ದಾಸ್ತಾನು ಸರ್ಕಾರಿ ಗೋದಾಮಿನಿಂದ ಲೆಕ್ಕ ಸಿಗದೆ ನಾಪತ್ತೆಯಾಗಿತ್ತು. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ನ.25, 2023 ರಂದು ದೂರು ದಾಖಲಾಗಿತ್ತು. (ಸಂಖ್ಯೆ: 247/2023)
ಈ ಅಕ್ಕಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ಬಂಧಿಸಲಾಗಿದೆ ಅನ್ನೋದು ಖಾಕಿಪಡೆಯ ಪ್ರತಿಕ್ರಿಯೆ. ಈ ಹಿಂದೆಯೂ ಕೂಡ, ಗುರುಮಠಕಲ್ ಸೇರಿದಂತೆ ವಿವಿಧೆಡೆ ನಡೆದಿದ್ದ ಅಕ್ಕಿ ಅಕ್ರಮ ಪ್ರಕರಣಗಳಲ್ಲಿ ಮಣಿಕಂಠ ವಿರುದ್ಧ ದೂರುಗಳು ದಾಖಲಾಗಿದ್ದವು. ವಿಚಾರಣೆಗೆಂದು ಜು.20ರಿಂದ ಮತ್ತೇ ಮೂರು ದಿನಗಳ ಶಹಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ."ಪ್ರಭಾವಿ "ಮಲ್ಲಿಕ್‌ಗೆ ಕಾಣದ ಕೈಗಳ ರಕ್ಷಣೆ?:
ಆದರೆ, ಶಹಾಪುರದ ಈ ಪ್ರಕರಣದಲ್ಲಿ ಮಣಿಕಂಠನ ಹೆಸರಿಸಿ, ಅಕ್ಕಿ ಅಕ್ರಮದ ರೂವಾರಿ ಚಾಮನಾಳದ ಮಲ್ಲಿಕ್ ಎಂಬಾತನನ್ನು ಪಾರು ಮಾಡಲು ಪೊಲೀಸರು ಹೂಡಿರುವ ತಂತ್ರಗಾರಿಕೆ ಇದಾಗಿದೆ. ಪ್ರಭಾವಿಗಳು ಹಾಗೂ ಪೊಲೀಸ್ ವಲಯದ ಖಾಸಾಪಡೆಯಲ್ಲಿರುವ ಚಾಮನಾಳದ ಮಲ್ಲಿಕ್ ಸಿಕ್ಕಿಬಿದ್ದರೆ, ಮತ್ತೆಲ್ಲಿ ತಮ್ಮ ಬಣ್ಣ ಬಯಲಾಗಬಹುದು ಎಂಬ ಕಾರಣಕ್ಕೆ ಮಣಿಕಂಠನ ಹೆಸರಿಸಿ, ಅಕ್ಕಿ ಅಕ್ರಮಕ್ಕೆ ತೇಪೆ ಹಚ್ಚುವ ಯತ್ನ ನಡೆದಿದೆ ಎಂಬ ಮಾತುಗಳು ಪ್ರತಿಧ್ವನಿಸುತ್ತಿವೆ.ಚುನಾವಣೆಗಳಲ್ಲಿ ಬಂಡವಾಳ ಹೂಡುವ, ಆಯಕಟ್ಟಿನ ಜಾಗೆಗಳಿಗೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಷ್ಟು ಪ್ರಭಾವ ಹೊಂದಿರುವ ಮಲ್ಲಿಕ್‌ನನ್ನು ಬಂಧಿಸುವುದಿರಲಿ, ವಿಚಾರಣೆಗೂ ಸಾಧ್ಯವಿಲ್ಲ ಎನ್ನದಿರುವಾಗ ಬೇರೊಬ್ಬರನ್ನು ಇಲ್ಲಿ ಸಿಲುಕಿಸಲು ಇದು ಹೂಡಿದ ತಂತ್ರಗಾರಿಕೆ ಎನ್ನಲಾಗಿದೆ.
ಶಹಾಪುರ ಅಕ್ಕಿ ಪ್ರಕರಣದಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದರೆ, ಕೆಲವರ ಅಮಾನತುಗೊಳಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಇನ್ನೂ ಕೆಲವರನ್ನು ವಿನಾಕಾರಣ ವಿಚಾರಣೆ ನಡೆಸಿ, ಅವರಿಂದ ಹಣ ಹಾಗೂ ಅಕ್ಕಿ ದಾಸ್ತಾನು ಸಂಗ್ರಹಿಸಿ, ಕಳ್ಳತನ ದಾಸ್ತಾನಿಗೆ ಸರಿ ಹೊಂದುವಂತೆ ಮಾಡುವ ಯತ್ನಗಳು ನಡೆದಿವೆ, ಇಲ್ಲಿ ಮೂಲ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪಗಳು ಆಗಲೂ ಕೇಳಿಬಂದಿದ್ದವು.2 ಜೂನ್ 2023 ರಿಂದ 23 ನವೆಂಬರ್ 2023 ರವರೆಗಿನ, ಸುಮಾರು ಐದಾರು ತಿಂಗಳ ಅವಧಿಯಲ್ಲಿ 6 ಸಾವಿರ ಕ್ವಿಂಟಲ್‌ಗೂ ಹೆಚ್ಚು ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಬಗ್ಗೆ "ಗೊತ್ತೇ ಇರಲಿಲ್ಲ " ಅನ್ನೋ ಸಂಬಂಧಿತ ಇಲಾಖೆಯ ಅಧಿಕಾರಿಗಳ ಉತ್ತರ ವ್ಯವಸ್ಥೆಯನ್ನು ಅಣಕಿಸುವಂತಿತ್ತು.
ಖರ್ಗೆ ಮೆಚ್ಚಿಸಲು ಮಣಿಕಂಠಾಸ್ತ್ರ: ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಚಿತ್ತಾಪೂರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಣಿಕಂಠ ರಾಠೋಡ್ ಸೋಲುಂಡಿದ್ದ. ತೀವ್ರ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಮಣಿಕಂಠನ ಮಟ್ಟ ಹಾಕಿದರೆ ಖರ್ಗೆ ಕುಟುಂಬ ಖುಷಿಯಾಗಬಹುದೇನೋ ಎಂಬ ಕಾರಣ, ಜೊತೆಗೆ ಖರ್ಗೆ ನೆಪದಲ್ಲಿ ಈ ಮೂಲಕ ಮಲ್ಲಿಕ್‌ನನ್ನು ಪಾರು ಮಾಡಿ ತಮ್ಮ ತಮ್ಮ ಅಕ್ರಮಗಳನ್ನೂ ಬಯಲಾಗದಂತೆ ನೋಡಿಕೊಳ್ಳಲು ಮಣಿಕಂಠಾಸ್ತ್ರ ಅಧಿಕಾರಿಗಳ ಕೊನೆಯ ಬತ್ತಳಿಕೆ ಎಂಬ ಮಾತುಗಳು ಖಾಕಿಪಡೆಯಲ್ಲೇ ಪಿಸುಗುಡುತ್ತಿವೆ.
ಏನಿದು ಅನ್ನಭಾಗ್ಯ ಅಕ್ಕಿ ಅಕ್ರಮ?: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ "ಅನ್ನಭಾಗ್ಯ " ಯೋಜನೆಯ ಪಡಿತರ ಅಕ್ಕಿ ಯಾದಗಿರಿ ಜಿಲ್ಲೆಯಲ್ಲಿ ಕಾಳಸಂತೆಕೋರರ ಪಾಲಾಗುತ್ತಿದೆ. ಪಡಿತರ ಅಕ್ಕಿಯನ್ನು ಕಳ್ಳತನದಿಂದ ಪಡೆದು, ಪಾಲಿಶ್ ಮಾಡಿದ ನಂತರ ಬೇರೆ ಬೇರೆ ಬ್ರ‍್ಯಾಂಡ್ ಹೆಸರಲ್ಲಿ ಪ್ಯಾಕಿಂಗ್ ಮಾಡಿ, ತೆಲಂಗಾಣ ಹಾಗೂ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಅನ್ಯ ರಾಜ್ಯಗಳಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವ ದಂಧೆ ನಡೆಯುತ್ತದೆ.ಈ ಹಿಂದೆ, ಅನೇಕ ಬಾರಿ ಇಂತಹ ಪ್ರಕರಣಗಳು ನಡೆದಿವೆಯಾದರೂ, ಬೆರಳಣಿಕೆಯಷ್ಟು ಪ್ರಕರಣಗಳು ದಾಖಲಾಗಿದ್ದರೆ, ಇನ್ನೂ ಬಹುತೇಕ ಪ್ರಕರಣಗಳು ತೆರೆಮರೆಯಲ್ಲಿಯೇ ಸಂಧಾನ ಕಂಡಿವೆ. ತನಿಖೆ ಕೇವಲ ನೆಪಮಾತ್ರಕ್ಕೆ ಎನ್ನುವಂತಿರುತ್ತದೆ. ರಾಜಕೀಯ ಪ್ರಭಾವ ಹಾಗೂ ಅಕ್ಕಿ ಅಕ್ರಮದ ಆರೋಪಿ ಜತೆ ಪೊಲೀಸ್ ಹಾಗೂ ಹಿರಿಯ ಅಧಿಕಾರಿಗಳ ನಡುವಿನ ಸ್ನೇಹ ಮೂಲ ಆರೋಪಿ ಪತ್ತೆಗೆ ಹಿಂದೇಟು ಹಾಕಿದಂತಿದೆ.