ಸಮಸ್ಯೆಗಳ ಬಗ್ಗೆ ಕಾದಂಬರಿ ರಚಿಸಿ ಪ್ರಕಟಿಸಿ

| Published : Apr 28 2025, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಮಕಾಲಿನ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸಾಹಿತ್ಯ, ಕಥೆ, ಕಾವ್ಯ ಮತ್ತು ಕಾದಂಬರಿ ರಚಿಸಿ ಪ್ರಕಟಿಸಿ ಸಮಾಜಕ್ಕೆ ನೀಡುವ ಕೆಲಸವನ್ನು ಸಾಹಿತ್ಯ ವಲಯ ಮಾಡಬೇಕಿದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಕುಂ.ವೀರಭದ್ರಪ್ಪ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಕಾಲಿನ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸಾಹಿತ್ಯ, ಕಥೆ, ಕಾವ್ಯ ಮತ್ತು ಕಾದಂಬರಿ ರಚಿಸಿ ಪ್ರಕಟಿಸಿ ಸಮಾಜಕ್ಕೆ ನೀಡುವ ಕೆಲಸವನ್ನು ಸಾಹಿತ್ಯ ವಲಯ ಮಾಡಬೇಕಿದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಕುಂ.ವೀರಭದ್ರಪ್ಪ ಆಶಯ ವ್ಯಕ್ತಪಡಿಸಿದರು.

ನಗರದ ಚನ್ನಬಸಮ್ಮಾ ಚಂದಪ್ಪ ಪ್ರತಿಷ್ಠಾನ, ವಿಜಯಪುರ ಸಮಾನ ಮನಸ್ಕರ ವೇದಿಕೆಯಿಂದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಆಯೋಜಿಸಿದ್ದ ಡಾ.ಸುಜಾತಾ ಚಲವಾದಿಯವರ ಲಚಮವ್ವ ಮತ್ತು ಇತರ ಕತೆಗಳು ಹಾಗೂ ಅಂಬೇಡ್ಕರ ಅರಿವಿನ ಜತೆಗಾರ ಗ್ರಂಥಗಳ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಹುತ್ವದ ತತ್ವ ಮತ್ತು ಸಿದ್ಧಾಂತಗಳ ಅಡಿಯಲ್ಲಿ ಬೆಳೆದಿದೆ. ಡಾ.ಬಿ.ಆರ್.ಅಂಬೇಡ್ಕರ ಅವರು ಅನುಭವಿಸಿದ ನೋವು, ಹಸಿವು, ಬಡತನದ ಬೇಗೆಯಲ್ಲಿ ಬೆಂದು ವಿಶ್ವಜ್ಞಾನಿ ಎನಿಸಿಕೊಂಡರು. ಆದ್ದರಿಂದಲೇ ಅಮೆರಿಕದ ಕೋಲಂಬಿಯ ವಿಶ್ವವಿದ್ಯಾಲಯದಲ್ಲಿ ಅವರ ಆಳೆತ್ತರದ ತೈಲವರ್ಣದ ಪ್ರತಿಮೆ ನಿರ್ಮಿಸಲಾಗಿದೆ. ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಹೆಚ್ಚು ಅರ್ಥ ಮಾಡಕೊಳ್ಳಬೇಕಿದೆ ಎಂದರು.ಹಿರಿಯ ಸಾಹಿತಿ ಮನು ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ, ಚನ್ನಬಸಮ್ಮಾ ಚಂದಪ್ಪ ಪ್ರತಿಷ್ಠಾನ ಸಮಾನ ಮನಸ್ಕರ ವೇದಿಕೆ ಮೂಲಕ ಈ ನೆಲದ ಸಾಹಿತ್ಯ ಮತ್ತು ಸಂಸ್ಕೃತಿ ಸಾರವನ್ನು ಬಿಂಬಿಸುವಲ್ಲಿ ಡಾ.ಸುಜಾತಾ ಅವರು ಅತ್ಯುತ್ತಮ ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಹತ್ತಾರು ಸಾಹಿತ್ಯ ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ವಿಶ್ವದಾದ್ಯಂತ ಡಾ.ಬಿ.ಆರ್.ಅಂಬೇಡ್ಕರ ಅವರ ಬರೆದಿರುವ ಪುಸ್ತಕ ಮತ್ತು ವಿಷಯಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಅವರ ವೈಜ್ಞಾನಿಕ ನೆಲೆಯ ಚಿಂತನೆಗಳು ಕುರಿತು ಡಾ.ಸುಜಾತ ಚಲವಾದಿ ಅವರಿಂದ ಉತ್ತಮ ಕೃತಿಗಳು ಬರಲೆಂದು ಆಶಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಅವರು ಆಧುನಿಕ ಭಾರತದ ಭವಿಷ್ಯವನ್ನು ಬರೆದಿದ್ದಾರೆ. ಶ್ರೇಷ್ಠ ಸಂವಿಧಾನ ರಚಿಸಿ ನೊಂದ ಸಮುದಾಯಗಳಿಗೆ ಶಾಶ್ವತ ನೆಲೆ ಒದಗಿಸಿದ್ದಾರೆ ಎಂದು ಸ್ಮರಿಸಿದರು.

ಲೇಖಕಿ ಡಾ.ಸುಜಾತ ಚಲವಾದಿ ಮಾತನಾಡಿ, ಬಸವಣ್ಣನ ವೈಚಾರಿಕ ವಿಚಾರಗಳು ನಮ್ಮ ಸಾಹಿತ್ಯದ ಮೇಲೆ ಪ್ರಭಾವ ಭೀರಿವೆ. ಅಕ್ಷರ ಕಲಿತು ಸಾಹಿತ್ಯ ಬರವಣಿಗೆಗೆ ನನ್ನ ತಂದೆಯವರ ಪ್ರೋತ್ಸಾಹ ಕಾರಣ. ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಭಯದ ವಾತಾವರಣದಿಂದ ಬೆಳೆದಿದ್ದರಿಂದ ನನ್ನ ಕೃತಿಗಳಲ್ಲಿ ಬಹುತೇಕ ನೊಂದವರ ಬದುಕಿನ ಪಾತ್ರಗಳ ಓರಣಗಳೇ ಪ್ರಧಾನವಾಗಿವೆ ಎಂದು ವಿವರಿಸಿದರು.

ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಡಾ.ಸುಜಾತ ಅವರ ಕಥೆಗಳಲ್ಲಿ ನಿಜವಾದ ತಾಯ್ತನದವಿದೆ. ಮಾತೃ ಸ್ವರೂಪದ ಅಂತಃಕರಣದ ಕಥೆಗಳಿವೆ. ಬದುಕಿನ ಬದಲಾವಣೆಗೆ ಅಕ್ಷರ ಮತ್ತು ಬರವಣಿಗೆ ಬೇಕು. ಜನಪರ ಮತ್ತು ದಲಿತ ಪರ ಧ್ವನಿಗಳಿಗೆ ಬೆಂಬಲವಿಲ್ಲದೆ ಸಾಹಿತಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಇದು ಹೆಚ್ಚು ಆತಂಕಕಾರಿ ಎಂದರು.

ಕಾರ್ಯಕ್ರಮದಲ್ಲಿ ರಾಜಶೇಖರ ಯಡಹಳ್ಳಿ, ರಮೇಶ ಆಸಂಗಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಅನೀಲ ಹೊಸಮನಿ, ದ್ರಾಕ್ಷಾಯಣಿ ಹುಡೇದ, ಹೇಮಲತಾ ವಸ್ತ್ರದ ಸೇರಿದಂತೆ ಹಲವರು ಭಾಗವಹಿಸಿದ್ದರು.

ದಾಕ್ಷಾಯಿಣಿ ಬಿರಾದಾರ ಸ್ವಾಗತಿಸಿ, ಪರಿಚಯಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿದರು.

---------

ಕೋಟ್‌

ಪ್ರಸ್ತುತ ಮೊಬೈಲ್ ಬಳಕೆ ಹೆಚ್ಚಾಗಿದೆ. ಪುಸ್ತಕ ಓದುವ ಬದಲಾಗಿ ಮೊಬೈಲ್ ನೋಡುವ ಗೀಳು ಬೆಳೆದಿದೆ. ಟಿವಿ, ಧಾರಾವಾಹಿ ವೀಕ್ಷಣೆ ಮಹಿಳೆಯರಲ್ಲಿ ಹೆಚ್ಚಾಗಿದ್ದರಿಂದ ಸಾಹಿತ್ಯ ಬರವಣಿಗೆ ಮತ್ತು ಓದುವ ಅಭಿರುಚಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಸಾಹಿತ್ಯದ ಬರವಣಿಗೆಯ ಜೊತೆಗೆ ಓದುಗರಿಗೆ ತಲುಪಿಸುವ ಕೆಲಸವನ್ನು ಸಾಹಿತಿಗಳು ಕಥೆಗಾರರು ಮತ್ತು ಕಾದಂಬರಿಕಾರರು ಉತ್ತಮ ಅಭಿರುಚಿಯ ಸಾಹಿತ್ಯ ರಚನೆಗೆ ಒತ್ತು ನೀಡಬೇಕು.ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ