ಜಾತಿ-ಉಪ ಜಾತಿ ಕಾಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸಿ

| Published : Sep 15 2025, 01:00 AM IST

ಜಾತಿ-ಉಪ ಜಾತಿ ಕಾಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2025-26ನೇ ಸಾಲಿನಲ್ಲಿ ಸೆ.22ರಿಂದ 15 ದಿನಗಳ ಕಾಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ಕೈಗೊಂಡಿದೆ. ಕಾಡುಗೊಲ್ಲ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಕಾಡುಗೊಲ್ಲ ಅಂತಲೇ ಬರೆಸಬೇಕು ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ದೊಡ್ಡರಾಜಣ್ಣ ಹೇಳಿದ್ದಾರೆ.

- ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ದೊಡ್ಡರಾಜಣ್ಣ ಸಲಹೆ । ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಚಿಂತನ-ಮಂಥನ ಸಭೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2025-26ನೇ ಸಾಲಿನಲ್ಲಿ ಸೆ.22ರಿಂದ 15 ದಿನಗಳ ಕಾಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ಕೈಗೊಂಡಿದೆ. ಕಾಡುಗೊಲ್ಲ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಕಾಡುಗೊಲ್ಲ ಅಂತಲೇ ಬರೆಸಬೇಕು ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ದೊಡ್ಡರಾಜಣ್ಣ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಜಿಲ್ಲಾ ಕಾಡುಗೊಲ್ಲರ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಚಿಂತನ-ಮಂಥನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜಗಳೂರು, ಚನ್ನಗಿರಿ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇಂದಿಗೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯ ಕಾಡುಗೊಲ್ಲರದ್ದು. ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇಂದಿಗೂ ನಮ್ಮ ಸಮುದಾಯ ಬಾಂಧವರು ಜೀವನ ನಡೆಸುತ್ತಿದ್ದಾರೆ. ಕಾಡುಗೊಲ್ಲ ಸಮುದಾಯವನ್ನು ಈಗಾಗಲೇ ಕುಲಶಾಸ್ತ್ರ ಅಧ್ಯಯನ ಮಾಡಿ, ಕೇಂದ್ರದ ಎಸ್‌ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಆದರೆ, ಇಂದಿಗೂ ಕೇಂದ್ರವು ನಮ್ಮನ್ನು ಎಸ್‌ಟಿ ಪಟ್ಟಿಗೆ ಸೇರಿಸದಿರುವುದು ದುರಂತ ಎಂದರು.

ಕಾಡುಗೊಲ್ಲರ ಮುಗ್ಧತೆ ಬಳಸಿಕೊಂಡು ಮುಂದುವರಿದ ಯಾದವ ಸಮುದಾಯದ ಗೊಲ್ಲ ಸಮಾಜದ ಮುಖಂಡರು ನಾವೆಲ್ಲರೂ ಗೊಲ್ಲರು, ಯಾದವರೆಂದು ವಂಚಿಸುತ್ತಿದ್ದಾರೆ. ಹಾಗಾಗಿ ಸಮಾಜ ಬಾಂಧವರು ಜಾತಿ ಕಾಲಂ ಮತ್ತು ಉಪ ಜಾತಿ ಕಾಲಂನಲ್ಲೂ ಕಾಡುಗೊಲ್ಲ ಅಂತಲೇ ಬರೆಸಬೇಕು. ಕಸುಬು ಮತ್ತು ಕುಲಕಸುಬಿನಲ್ಲಿ ಪಶು ಸಂಗೋಪನೆ, ಕುರಿ, ಮೇಕೆ ಸಾಕಾಣಿಕೆ, ಹೈನುಗಾರಿಕೆಯೆಂದೇ ಬರೆಸಬೇಕು ಎಂದು ದೊಡ್ಡ ರಾಜಣ್ಣ ಮನವಿ ಮಾಡಿದರು.

ಹೋರಾಟ ಮನಸ್ಥಿತಿ ಮುಖ್ಯ:

ಸಂಘದ ರಾಜ್ಯ ಗೌರವಾಧ್ಯಕ್ಷ ಮೀಸೆ ಮಹಲಿಂಗಪ್ಪ ಮಾತನಾಡಿ, ರಾಜ್ಯದ 12 ಜಿಲ್ಲೆ, 44 ತಾಲೂಕು, 1240 ಗ್ರಾಮಗಳಲ್ಲಿರುವ ನಮ್ಮೆಲ್ಲಾ ಸಮುದಾಯ ಬಾಂಧವರು ಶಿಕ್ಷಣವಂತರಾಗಿ, ಸಂಘಟಿತರಾಗಿ ಹೋರಾಟ ಮಾಡುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಶೈಕ್ಷಣಿಕವಾಗಿ ನಾವು ಸಾಧನೆ ಮಾಡದಿದ್ದರೆ ಯಾರೂ ನಮ್ಮನ್ನು ಗಮನಿಸುವುದಿಲ್ಲ. ಶಿಕ್ಷಣಕ್ಕಿಂತ ದೊಡ್ಡ ಶಕ್ತಿ ಇಂದಿನ ಜಗದಲ್ಲಿ ಬೇರಾವುದೂ ಇಲ್ಲ. ಹಾಗಾಗಿ, ನಮ್ಮ ಸಮಾಜದ ಭವಿಷ್ಯವಾದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಜಾತಿ ಪತ್ರ ತಾರತಮ್ಯ:

ರಾಜ್ಯ ಕಾಡುಗೊಲ್ಲ ಯುವಸೇನೆ ಮುಖಂಡ ಮಹಾಲಿಂಗಪ್ಪ ಜೆ.ಎಚ್.ಎಂ. ಹೊಳೆ ಮಾತನಾಡಿ, ದಾವಣಗೆರೆ ತಾಲೂಕು ದಂಡಾಧಿಕಾರಿಗಳು ಗೊಲ್ಲರಹಟ್ಟಿಗಳ ಜನರು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡದೇ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಸರ್ಕಾರದ ಆದೇಶವೇ ಇದ್ದರೂ ಜಾತಿ ಪ್ರಮಾಣ ಪತ್ರ ಕೊಡದೇ ಸರ್ಕಾರದ ಸುತ್ತೊಲೆಗಳನ್ನೇ ಗಾಳಿಗೆ ತೂರುತ್ತಿರುವುದು ದುರಂತ. ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಹೋರಾಟ ನಡೆಸುವ ಜೊತೆಗೆ ನ್ಯಾಯಾಲಯದ ಮೆಟ್ಟಿಲನ್ನೇರಲಿದ್ದೇವೆ ಎಂದು ಎಚ್ಚರಿಸಿದರು.

ಕಾಡುಗೊಲ್ಲರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭುದೇವ, ಜಿಲ್ಲಾಧ್ಯಕ್ಷ ಸುಂಕಪ್ಪ, ಬಿಜೆಪಿ ಮುಖಂಡರಾದ ಜಿ.ಆರ್. ಶಶಿಧರ, ಹೊನ್ನೂರು ಗಂಗಾಧರ, ಪ್ರಾಧ್ಯಾಪಕ ಶೇಷಪ್ಪ ರುದ್ರನಕಟ್ಟೆ, ಏಕಾಂತಪ್ಪ, ತುಮಕೂರು ದೊಡ್ಡೇಗೌಡ, ಜಗಳೂರು ಚಿತ್ತಪ್ಪ, ಚನ್ನಗಿರಿ ರಂಗನಾಥ, ಗುಡಾಳ್ ಐಗೂರು ಹನುಮಂತಪ್ಪ, ಜಗಳೂರು ಜೆ.ಸಿ. ಕೃಷ್ಣಮೂರ್ತಿ, ಕೆಆರ್‌ಎಸ್ ಪಕ್ಷದ ವೀರಭದ್ರಪ್ಪ, ಚನ್ನಗಿರಿ ಶಿಕ್ಷಕ ದೇವೇಂದ್ರಪ್ಪ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐಗೂರು ದೇವೇಂದ್ರಪ್ಪ, ಬೋಧಕ ನಾಗರಾಜ, ಸಮಾಜದ ಮುಖಂಡರು ಇದ್ದರು.

- - -

(ಬಾಕ್ಸ್‌)

* ಕಾಡುಗೊಲ್ಲರ ದಾರಿ ತಪ್ಪಿಸುವ ಶ್ರೀನಿವಾಸ, ಪೂರ್ಣಿಮಾ

- ಯಾದವ ಶ್ರೀಗಳೂ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ: ಪ್ರಭುದೇವ ಆರೋಪ

ದಾವಣಗೆರೆ: ಕಾಡುಗೊಲ್ಲರನ್ನು ಒಡೆದಾಳುವ ನೀತಿಯನ್ನು ಸರ್ಕಾರಗಳು ಮಾಡುತ್ತಿವೆ. ಅಲ್ಲದೇ, ರಾಜ್ಯದ ಇಡೀ ಕಾಡುಗೊಲ್ಲ ಸಮುದಾಯವನ್ನೇ ದಿಕ್ಕು ತಪ್ಪಿಸುವ ಕೆಲಸವನ್ನು ಡಿ.ಟಿ.ಶ್ರೀನಿವಾಸ, ಪೂರ್ಣಿಮಾ ಶ್ರೀನಿವಾಸ ಮಾಡುತ್ತಿದ್ದು, ಇದು ಖಂಡನೀಯ ಎಂದು ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭುದೇವ ಹೇಳಿದರು.

ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಶ್ರೀಕೃಷ್ಣ ಮಠದ ಶ್ರೀ ಕೃಷ್ಣ ಯಾದವ ಮಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಕಾಡುಗೊಲ್ಲರಾಗಿದ್ದು, ಜಾತಿ ಕಾಲಂನಲ್ಲಿ ಗೊಲ್ಲ, ಉಪ ಜಾತಿ ಕಾಲಂನಲ್ಲಿ ಕಾಡುಗೊಲ್ಲರೆಂದು ಬರೆಸಲು ಹೇಳಿ, ಸಮಾಜವನ್ನು ದಿಕ್ಕು ತಪ್ಪಿಸುತ್ತಿರುವುದು ತರವಲ್ಲ ಎಂದು ಅವರು ಆಕ್ಷೇಪಿಸಿದರು.

ನಮ್ಮ ಕಾಡುಗೊಲ್ಲ ಸಮುದಾಯಕ್ಕೂ, ಯಾದವರಿಗೂ ಯಾವುದೇ ಸಂಬಂಧವಿಲ್ಲ. ನಾವು ಮೂಲತಃ ಬುಡಕಟ್ಟು ಕಾಡುಗೊಲ್ಲರು. ಹಾಗಾಗಿ, ನಾವು ಯಾವುದೇ ಷಡ್ಯಂತ್ರಕ್ಕೆ ಬಲಿಯಾಗುವುದು ಬೇಡ. ನಾವೆಲ್ಲರೂ ಒಂದಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮದೇ ಕಾಡುಗೊಲ್ಲ ಸಮುದಾಯದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಸಂಘದಿಂದ ಕಾಡುಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಾಡುಗೊಲ್ಲರೂ ಜಾಗೃತರಾಗಬೇಕು ಎಂದರು.

- - -

-14ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಕಾಡುಗೊಲ್ಲರ ಸಂಘ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಚಿಂತನ-ಮಂಥನ ಸಭೆಯಲ್ಲಿ ಸಮಾಜದ ರಾಜ್ಯಾಧ್ಯಕ್ಷ ದೊಡ್ಡರಾಜಣ್ಣ ಮಾತನಾಡಿದರು.