ಸಾರಾಂಶ
- ಪಂಚಮಸಾಲಿಗಳಲ್ಲಿ ಅರಿವು ಮೂಡಿಸಲು ರಾಜ್ಯ ಅಭಿಯಾನ: ವಚನಾನಂದ ಶ್ರೀ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನುಡಿದರು. ನಗರದ ಸರಸ್ವತಿ ಬಡಾವಣೆಯಲ್ಲಿ ಸಮಾಜ ಮುಖಂಡರಾದ ಬಾದಾಮಿ ಚಂದ್ರಶೇಖರ್ ಅವರ ಬಾದಾಮಿ ನಿಲಯದಲ್ಲಿ ಸೋಮವಾರ ಜಾತಿಗಣತಿ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲು ಹಾಗೂ ಮನೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಅನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕರ್ನಾಟಕ ಸರ್ಕಾರದ ಆದೇಶದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಶುರು ಮಾಡಿದೆ. ಪಂಚಮಸಾಲಿ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ, ಕ್ರಮ ಸಂಖ್ಯೆ A-0868 ಬರೆಸಬೇಕು. ಜಾತಿಗಣತಿ ಹಿನ್ನೆಲೆ ಯಲ್ಲಿ ರಾಜ್ಯದ ಪ್ರತಿ ಊರಿಗೆ ಹೋಗಿ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದೇವೆ. ಸೋಮವಾರ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಹಿಂದೂ ಧರ್ಮ ಬರೆಸುವ ಕುರಿತ ಯಾವುದೇ ಗೊಂದಲದ ವಿಚಾರ ಬೇಡ. ಈಗಾಗಲೇ ನಾವೆಲ್ಲಾ ಶ್ರೀಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂಬುದಾಗಿ ಬರೆಸಬೇಕೆಂಬುದಾಗಿ ಹೇಳಿದ್ದಾರೆ. ವೀರಶೈವ ಲಿಂಗಾಯತರು ಸಾಮಾಜಿಕವಾಗಿ ಒಂದು ಧರ್ಮದ ಕಾಲಂನಲ್ಲಿ ಹಿಂದೂ ಅಂತಲೇ ಬರೆಸಬೇಕು. ಈ ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಬಾಂಧವರಲ್ಲಿ ಯಾವುದೇ ಗೊಂದಲವೂ ಇಲ್ಲ. ಇದು ಕೇವಲ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಲ್ಲ. ರಾಜಕೀಯವೂ ಇದೆ ಎಂದು ಶ್ರೀಗಳು ಸೂಚ್ಯವಾಗಿ ವಿವರಿಸಿದರು.ನಮ್ಮ ಸಮುದಾಯದ ಸಂಖ್ಯೆಯು ಗಣತಿಯಲ್ಲಿ ಕಡಿಮೆಯಾದರೆ ನಮಗೆ ಸಿಗುವಂತಹ ಮೀಸಲಾತಿಯ ಪ್ರಮಾಣವೇ ಕಡಿಮೆಯಾಗುತ್ತದೆ. ಈ ಹಿಂದೆ ಅವೈಜ್ಞಾನಿಕ ಸಮೀಕ್ಷೆ ಆಗಿದ್ದ ಕಾರಣಕ್ಕೆ ಇದೀಗ ಮತ್ತೊಮ್ಮೆ ಜಾತಿಗಣತಿ ಆರಂಭವಾಗಿದೆ. ಜಾತಿಗಣತಿಯನ್ನು ನಾವೂ ನಿರಂತರ ಗಮನಿಸುತ್ತೇವೆ. ಒಂದುವೇಳೆ ಜಾತಿಗಣತಿ ಕಾರ್ಯವು ಸರಿ ಆಗದಿದ್ದರೆ ತಿರಸ್ಕಾರ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ, ಸಮಾಜದ ಜಿಲ್ಲಾಧ್ಯಕ್ಷ, ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರಾದ ಬಿ.ಸಿ. ಉಮಾಪತಿ, ಜಿಲ್ಲಾ ಕಾರ್ಯದರ್ಶಿ ಕಾಶೀನಾಥ, ಕೈದಾಳ್ ಶಿವಶಂಕರ, ವೀರಭದ್ರಪ್ಪ, ಶಿವಶಂಕರ, ವಾಣಿ ಶಿವಣ್ಣ, ಶ್ರೀಧರ್, ರಾಜಣ್ಣ, ಕಾಶೀನಾಥ, ಪತ್ರಿ ರಾಜಪ್ಪ, ಶಂಭುಲಿಂಗಪ್ಪ, ಶ್ರೀಧರ್, ಮಾಲತೇಶ ದೇಸಾಯಿ, ನಂದೀಶ ಬಳ್ಳಾರಿ, ಬಾದಾಮಿ ಚಂದ್ರಶೇಖರ ಸೇರಿದಂತೆ ಸಮಾಜದ ಮುಖಂಡರು, ಸಮಾಜ ಬಾಂಧವರು ಇದ್ದರು.ಇದೇ ವೇಳೆ ಸಮಾಜ ಬಾಂಧವರ ಮನೆಗಳಿಗೆ ಜಾಗೃತಿ ಸ್ಟಿಕ್ಕರ್ಗಳನ್ನು ಶ್ರೀ ವಚನಾನಂದ ಸ್ವಾಮೀಜಿ ಅಂಟಿಸಿ, ಜಾತಿಗಣತಿ ವೇಳೆ ಏನೆಲ್ಲಾ ಬರೆಸಬೇಕೆಂಬ ಬಗ್ಗೆ ಅರಿವು ಮೂಡಿಸಿದರು.
- - -(ಕೋಟ್)
ಜನಗಣತಿ ಕುರಿತು ವಾರಕ್ಕೊಮ್ಮೆ ಹೊಸ ಹೊಸ ಕೈಪಿಡಿ ಬರುತ್ತಿದೆ. ತಮಗೆ ತಿಳಿದಂತೆಲ್ಲಾ ಮಾಡಿಕೊಂಡು ಹೋಗುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿರುವ ಸಚಿವರಿಗೆ ಹಲವಾರು ಗೊಂದಲಗಳೂ ಇವೆ. ಇಂತಹ ಸಮೀಕ್ಷೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರ. ಆದರೆ, ಕೇಂದ್ರಕ್ಕಿಂತಲೂ ಮುಂಚೆಯೇ ನಾವು ಜಾತಿಗಣತಿ ಮಾಡಬೇಕೆಂಬ ತರಾತುರಿಯಲ್ಲಿ ರಾಜ್ಯ ಸರ್ಕಾರ ಇದೆ.- ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ.
- - --22ಕೆಡಿವಿಜಿ1, 2, 3: ದಾವಣಗೆರೆ ಸರಸ್ವತಿ ಬಡಾವಣೆಯಲ್ಲಿ ಪಂಚಮಸಾಲಿ ಮನೆಗಳಿಗೆ ಶ್ರೀ ವಚನಾನಂದ ಸ್ವಾಮೀಜಿ, ಬಿ.ಸಿ.ಉಮಾಪತಿ ಇತರರು ಸ್ಟಿಕ್ಕರ್ ಅಂಟಿಸಿ, ಜಾತಿಗಣತಿ ಬಗ್ಗೆ ಅರಿವು ಮೂಡಿಸಿದರು.