ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ವಿನಾಕಾರಣ ಗೊಂದಲಕ್ಕೆ ಒಳಗಾಗದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಹೀಗಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ವಿನಾಕಾರಣ ಗೊಂದಲಕ್ಕೆ ಒಳಗಾಗದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಹೀಗಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ ಹೇಳಿದರು.

ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಶಿಇ, ಜಿಲ್ಲಾ ರಕ್ಷಣಾ ಘಟಕ ದಾವಣಗೆರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಹಾಗೂ ಪೋಕ್ಸೋ ಕಾಯ್ದೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಭ್ಯಾಸದ ಕಡೆಗೆ ಗಮನವಿರಲಿ:

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ದೈಹಿಕ, ಮಾನಸಿಕ ದೌರ್ಜನ್ಯಗಳನ್ನು ತಡೆಗಟ್ಟಲು ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಯುವಕ, ಯುವತಿಯರು ಯೌವನಕ್ಕೆ ಬಂದ ಮೇಲೆ ಮೊಬೈಲ್, ಟಿವಿ ಸೇರಿದಂತೆ ಸಾಮಾಜಿಕ ಜಾಲತಾಣಗಳಂತಹ ಪ್ರಭಾವದಿಂದ ಪ್ರೀತಿ- ಪ್ರೇಮದಲ್ಲಿ ಬಿದ್ದು ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಹೀಗಾಗದೇ ವಿದ್ಯಾಭ್ಯಾಸದ ಕಡೆಗೆ ಮಾತ್ರ ಗಮನಹರಿಸಬೇಕು. ಇಲ್ಲದಿದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಭ್ರೂಣಹತ್ಯೆ ನಿಲ್ಲಬೇಕು:

ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಉದ್ದೇಶ, ಹೆಣ್ಣುಮಕ್ಕಳನ್ನು ಯಾವುದೇ ಕಾರಣಕ್ಕೂ ದುರ್ಬಲ ಎಂದು ಭಾವಿಸಬಾರದು, ಹೆಣ್ಣುಮಕ್ಕಳು ಮಾನಸಿಕ, ದೈಹಿಕ ಹಾಗೂ ದೃಢವಾಗಿ ಇರಬೇಕೆಂದು ಈ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಅವರಿಗೆ ಎಲ್ಲ ರೀತಿಯಲ್ಲೂ ಸ್ಥಾನಮಾನಗಳು ಸಿಗುವಂತೆ ನೋಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಪೋಕ್ಸೋ ಕಾನೂನು ಎಂದರೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ, ಭೂಮಿ ಹೆಣ್ಣು- ಗಂಡು ಮೂಲದಿಂದ ಹುಟ್ಟಿದೆ. ಹೆಣ್ಣು ಇಲ್ಲದಿದ್ದರೆ ಜಗತ್ತು ನಡೆಯುವುದಿಲ್ಲ. ಹೆಣ್ಣು ಎಂದರೆ ನಿರ್ಲಕ್ಷ್ಯ ಮಾಡುವುದು, ಹೆಣ್ಣು ಭ್ರೂಣಹತ್ಯೆ ಮಾಡುವುದು ಸೇರಿದಂತೆ ಹಲವಾರು ತೊಂದರೆ ಆಗುತ್ತಿರುವುದನ್ನು ನಾವೆಲ್ಲರೂ ದಿನನಿತ್ಯ ನೋಡುತ್ತಿದ್ದೇವೆ. ಇಂಥ ಬೆಳವಣಿಗೆ ಸಂಪೂರ್ಣ ಇಲ್ಲವಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ಕವಿತಾ, ಪೊಲೀಸ್ ಅಧಿಕಾರಿ ಶಿಲ್ಪ, ಅಮೃತ ವಿದ್ಯಾಲಯದ ಪ್ರಾಚಾರ್ಯೆ ಪ್ರತಿಭಾ, ಗುರುಪ್ರಸಾದ್ ಹಾಗೂ ಅಮೃತ ವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

* 10ನೇ ತರಗತಿ ಪರೀಕ್ಷೆ ಬರೆಯಲು ಸಿದ್ದತೆ 9ನೇ ತರಗತಿಯಿಂದ ಪಿಯುಸಿಯವರೆಗಿನ ಶಿಕ್ಷಣದ ವಿದ್ಯಾರ್ಥಿಗಳಿಗೆ ತುಂಬಾ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ಕಠಿಣ ಅಭ್ಯಾಸ ಬಹಳ ಮುಖ್ಯವಾಗಿದೆ. ಓದಿನ ಕಡೆಗೆ ಹೆಚ್ಚು ಗಮನಹರಿಸಿ ಪುಸ್ತಕಗಳನ್ನು ಮನಸ್ಸಿಗೆ ಅರ್ಥವಾಗುವ ರೀತಿ ಓದಬೇಕು. ಓದಿದ್ದನ್ನು ಪುನರ್ ಮನನ ಮಾಡಬೇಕು ಎಂದು ನ್ಯಾ. ಮಹಾವೀರ ಮ.ಕರೆಣ್ಣವರ ಸಲಹೆ ನೀಡಿದರು.

ನೀವು ಉನ್ನತಮಟ್ಟದ ಹುದ್ದೆ ತಲುಪಲು ಅದಕ್ಕೆ ತಕ್ಕಂತೆ ಓದಬೇಕು. ಪರೀಕ್ಷೆಯಲ್ಲಿ ಫೇಲ್ ಆದರೆ ಮನೆ ಬಿಟ್ಟು ಹೋಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನ. ಸಮಯದ ನಿರ್ವಹಣೆ ತುಂಬಾ ಮುಖ್ಯವಾಗಿದ್ದು, ಯಾವುದಕ್ಕೆ ಎಷ್ಟು ಸಮಯ ನಿಗದಿಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿಕೊಳ್ಳಬೇಕು ಎಂದರು.

ಪರೀಕ್ಷೆ ಸಮಯದಲ್ಲಿ ಮಕ್ಕಳು ಗಾಬರಿಯಾಗುವುದು ಸಾಮಾನ್ಯವಾಗಿದೆ. ಪರೀಕ್ಷೆ ಬರೆಯಲು ದೇಹ ಮತ್ತು ಬುದ್ದಿ ಎರಡನ್ನು ಕೇಂದ್ರೀಕರಿಸಿಕೊಳ್ಳಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಓದಲು ಬರೆಯಲು ದಿನದ ಚಟುವಟಿಕೆಗಳನ್ನು ತಯಾರಿಸಿಕೊಳ್ಳಬೇಕು. ಉತ್ತಮ ಆಹಾರ ಸೇವಿಸಿ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು. ತಂಪು ಪಾನೀಯ, ಪೌಷ್ಠಿಕ ತರಕಾರಿ ಇರುವ ಆಹಾರವನ್ನು ಸೇವಿಸಬೇಕು ಎಂದರು.