ಸಾರಾಂಶ
ಬಳ್ಳಾರಿ : ಬರುವ ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಇತ್ತೀಚೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಸ್ತಾಕ್ ಆಯ್ಕೆಗೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೇಖಕಿ ಬಾನು ಮುಸ್ತಾಕ್ ಅವರ ಹೆಸರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿಸಲು ನಿರ್ಧರಿಸಲಾಯಿತು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಾನು ಮುಸ್ತಾಕ್ ಅವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬಳ್ಳಾರಿ ಸಮ್ಮೇಳನಕ್ಕೆ ಮಹಿಳಾ ಲೇಖಕಿಯನ್ನು ಆಯ್ಕೆಗೊಳಿಸಿರುವುದು ಹೆಚ್ಚು ಸಂತಸ ತಂದಿದೆ. ಈ ವರೆಗೆ ಜರುಗಿದ 87 ಸಾಹಿತ್ಯ ಸಮ್ಮೇಳನಗಳಲ್ಲಿ ನಾಲ್ವರು ಮಹಿಳಾ ಲೇಖಕಿಯರು ಮಾತ್ರ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶ ಸಿಕ್ಕಿತ್ತು. ಇದೀಗ ಬಳ್ಳಾರಿಯಲ್ಲಿ ಜರುಗುತ್ತಿರುವ ಸಮ್ಮೇಳನಕ್ಕೂ ಹಿರಿಯ ಮಹಿಳಾ ಲೇಖಕಿಯನ್ನು ಆಯ್ಕೆಗೊಳಿಸಲಾಗಿದೆ.
ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಲೇಖಕಿ ಬಾನು ಮುಸ್ತಾಕ್ ಅವರಿಗೆ ತಿಳಿಸಲಾಗಿದ್ದು, ಅಧ್ಯಕ್ಷ ಆಯ್ಕೆಗೆ ನನ್ನ ಒಪ್ಪಿಗೆ ಇದೆ. ಕನ್ನಡದ ಕೆಲಸ ನನ್ನ ಕರ್ತವ್ಯ ಎಂದು ತಿಳಿಸಿದ್ದಾರೆ ಎಂದು ಮಹೇಶ ಜೋಶಿ ತಿಳಿಸಿದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ಲೇಖಕಿಯರಾದ ವೀಣಾ ಶಾಂತೇಶ್ವರಿ ಹಾಗೂ ಮಾಲತಿ ಪಟ್ಟಣಶೆಟ್ಟಿ ಅವರ ಹೆಸರು ಕೇಳಿ ಬಂದವು. ಅಂತಿಮವಾಗಿ ಲೇಖಕಿ ಬಾನು ಮುಸ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಬಾನು ಮುಸ್ತಾಕ್ ಅವರ ಸಾಹಿತ್ಯ ಸಾಧನೆ ಜಗತ್ತಿಗೆ ಗೊತ್ತಾಗುವಂತೆ ಪ್ರಧಾನ ಪಾತ್ರ ವಹಿಸಿದ ದೀಪಾ ಬಾಸ್ತಿ ಅವರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿದ್ದೇನೆ. ಲೇಖಕಿ ಬಾನು ಮುಸ್ತಾಕ್ ಅವರ ಆಯ್ಕೆಗೆ ಅಭಿನಂದನೆ ತಿಳಿಸಿದ್ದಾರೆ ಎಂದರು.
ಜು. 1ರಂದು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜತೆ ಸಮ್ಮೇಳನ ಕುರಿತಂತೆ ಚರ್ಚಿಸಲಾಗುವುದು ಎಂದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ಮಹೇಶ ಜೋಶಿ ಅವರು ಸುದ್ದಿಗೋಷ್ಠಿಯನ್ನು ತರಾತುರಿಯಲ್ಲಿ ಮುಗಿಸಿ ಹೊರನಡೆದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಸೇರಿದಂತೆ ವಿವಿಧ ಜಿಲ್ಲೆಗಳ ಕಸಾಪ ಜಿಲ್ಲಾಧ್ಯಕ್ಷರು ಸುದ್ದಿಗೋಷ್ಠಿಯಲ್ಲಿದ್ದರು.