ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸಾಹಿತಿ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿದ್ದು, ನಮ್ಮವರೇ ಅದನ್ನು ತಪ್ಪಿಸಿ ತಾವೇ ಗಿಟ್ಟಿಸಿಕೊಂಡದ್ದು ಕನ್ನಡಕ್ಕಾದ ನಷ್ಟ ಎಂದು ಮಕ್ಕಳ ಸಾಹಿತಿ ಪ್ರೊ.ಟಿ.ಎಸ್. ನಾಗರಾಜಶೆಟ್ಟಿ ಬೇಸರ ವ್ಯಕ್ತಪಡಿಸಿದರು.ನಗರದ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವಿಚಾರವಂತಿಕೆ ಮತ್ತು ಸಾಂಪ್ರಾದಾಯಿಕತೆ ಸಮನ್ವಯತೆಯನ್ನು ಜನಮನಕ್ಕೆ ಮತ್ತು ಕನ್ನಡ ಸಾರಸ್ವತಲೋಕಕ್ಕೆ ಉಣ ಬಡಿಸಿದವರು ಭೈರಪ್ಪನವರು. ಇವರ ಕಾದಂಬರಿಯು ಜೀವನ ಮೌಲ್ಯಗಳ ಪ್ರತೀಕವಾಗಿದ್ದವು. ಬರವಣಿಗೆಯಲ್ಲಿ ಬಾಡದ, ಬತ್ತದ ಸಾಮಾಜಿಕತೆಯನ್ನು ತರುವ ಮೂಲಕ ಓದುಗರ ಚಿಂತನೆಗೆ ಅವಕಾಶ ಕಲ್ಪಿಸಿದ್ದರು. ಸಾರ್ಥಕ ಬದುಕಿನ ಸಾಧಕ ಭೈರಪ್ಪನವರ ಬರವಣಿಗೆ ಸಾಕ್ಷಯಾಗಿದೆ ಎಂದ ಅವರು ದೇಹ ಅಶಾಶ್ವತ ಮೇರು ಕೃತಿಗಳೊಂದಿಗೆ ಭೈರಪ್ಪನವರು ಎಂದೆಂದಿಗೂ ನಮ್ಮೊಡನಿರುತ್ತಾರೆ ಎಂದರು.ಕಸಾಪ ಪದಾಧಿಕಾರಿ ಟಿ.ಸಿ.ಗೋವಿಂದರಾಜು ಮಾತನಾಡಿ, ಸಾಹಿತಿ ಭೈರಪ್ಪನವರು ಕೃಷಿಕರ ಸಮಸ್ಯೆಗಳಿಗೆ ನೀರಾವರಿಯೊಂದೇ ಪರಿಹಾರವೆಂದರಿತು ಸುತ್ತಲಿನ ಹಳ್ಳಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಿದ ಭಗೀರಥ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಭೈರಪ್ಪನವರನ್ನು ನೊಣವಿನಕೆರೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ಆದರೆ ಆಗ ಅವರು ಬರಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ವಿಶ್ವ ಸಾಹಿತ್ಯ ಮಟ್ಟದ ಕೃತಿಗಳ ಮೂಲಕ ಅವರು ಸದಾ ನಮ್ಮೊಂದಿಗೆ ಇರುತ್ತಾರೆಂದು ನುಡಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಅರ್. ಗುರುಸ್ವಾಮಿ, ಕಸಾಪ ಕಾರ್ಯದರ್ಶಿ ಎಚ್.ಎಸ್. ಮಂಜಪ್ಪ, ನಿವೃತ್ತ ಪ್ರಾಂಶುಪಾಲ ನಂ. ಶಿವಗಂಗಪ್ಪ, ಪದಾಧಿಕಾರಿಗಳಾದ ಬಿ. ನಾಗರಾಜು, ವಿ.ಎಸ್. ಮಲ್ಲಿಕಾರ್ಜುನಯ್ಯ, ಚಂದ್ರರಾಜ ಅರಸು, ಸರಸ್ವತಿ ಹಿರಣ್ಣಯ್ಯ ಮತ್ತಿತರರಿದ್ದರು.