ಒಂದು ಲೇಖನ ದೊಡ್ಡ ಸದ್ದು ಮಾಡಬಹುದು. ಅಷ್ಟಕ್ಕೇ ಪ್ರಪಂಚ ನಮ್ಮ ಮುಷ್ಟಿಯಲ್ಲಿದೆಂದು ಭಾವಿಸಬಾರದು. ಜಗತ್ತಿನ ಸಾಧ್ಯತೆಗಳು ವಿಶಾಲವಾಗಿದ್ದು, ಬರಹಗಾರ ಸದಾ ಕಲಿಯುವ ವಿನಯ ಉಳಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಒಂದು ಲೇಖನ ದೊಡ್ಡ ಸದ್ದು ಮಾಡಬಹುದು. ಅಷ್ಟಕ್ಕೇ ಪ್ರಪಂಚ ನಮ್ಮ ಮುಷ್ಟಿಯಲ್ಲಿದೆಂದು ಭಾವಿಸಬಾರದು. ಜಗತ್ತಿನ ಸಾಧ್ಯತೆಗಳು ವಿಶಾಲವಾಗಿದ್ದು, ಬರಹಗಾರ ಸದಾ ಕಲಿಯುವ ವಿನಯ ಉಳಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಕಿವಿಮಾತು ಹೇಳಿದರು.

ನಗರದ ಎಸ್‌ಜಿಬಿಐಟಿ ಕಾಲೇಜಿನ ಶಿವಕುಮಾರ ಸಂಬರಗಿ ಮಠ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ಸ್‌ ಯೂನಿಯನ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಪುಟದಲ್ಲಿ ಹೇಳಬೇಕಾದ ಸಂಗತಿಯನ್ನು ಒಂದು ಪ್ಯಾರಾದಲ್ಲಿ, ಪ್ಯಾರಾದ ವಿಷಯವನ್ನು ಒಂದು ಸಾಲಿನಲ್ಲಿ ಹಾಗೂ ಸಾಲಿನ ಅರ್ಥವನ್ನು ಒಂದೇ ಪದದಲ್ಲಿ ಹಿಡಿದಿಡುವ ಪತ್ರಕರ್ತರ ಸಾಮರ್ಥ್ಯಕ್ಕೆ ತಲೆಬಾಗಬೇಕು. ಎಂಎ, ಪಿಎಚ್‌ಡಿ, ನೆಟ್‌, ಸ್ಲೆಟ್‌ನಂತಹ ಶೈಕ್ಷಣಿಕ ಮಾನದಂಡಗಳಿಗಿಂತ ವೃತ್ತಿಯಲ್ಲಿ ಅವರು ಮಾಡಿದ ನಿರಂತರ ಕೃಷಿ ಮತ್ತು ಪಡೆದ ಅನುಭವ ದೊಡ್ಡದು. ಅದು ಯಾವುದೇ ತಪಸ್ಸಿಗೂ ಕಡಿಮೆಯಲ್ಲ. ಆದರೆ, ಬರಹದ ಯಶಸ್ಸು ಅಹಂಕಾರಕ್ಕೆ ಕಾರಣವಾಗಬಾರದು ಎಂದರು.ಪ್ರಕಟವಾಗದಿರಬಹುದು, ಒಂದು ಪ್ರಯತ್ನ ವಿಫಲವಾಗಬಹುದು. ಅದಕ್ಕಾಗಿ ವೃತ್ತಿಯನ್ನೇ ಕೈಬಿಡಬಾರದು. ಒಂದು ಬಾಗಿಲು ಮುಚ್ಚಿದರೇ ಮತ್ತೊಂದು ದೊಡ್ಡ ಬಾಗಿಲು ತೆರೆಯುತ್ತದೆ. ನೋವು ಶಾಶ್ವತವಲ್ಲ, ಸಾಧಿಸುವ ಛಲ ಮತ್ತು ಸತ್ಯದ ದಾರಿಯಲ್ಲಿ ನಡೆಯುವ ನಿಶ್ಚಲತೆ ಮುಖ್ಯ ಎಂದು ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸುವ ನಿರಾಸೆ, ಒತ್ತಡ, ಕಷ್ಟಗಳಿಗೆ ಆತ್ಮಸ್ಥೈರ್ಯ ತುಂಬಿದರು.ಹೆಣ್ಣುಮಕ್ಕಳಿಗಾಗಿ ದೊಡ್ಡ ವಸತಿನಿಲಯ ನಿರ್ಮಿಸುವ ನಾಗನೂರು ಮಠದ ಮಠದ ದೂರದೃಷ್ಟಿ ಮತ್ತು ಆತ್ಮೀಯತೆಯ ಫಲವಾಗಿ ರೂಪುಗೊಳ್ಳುತ್ತಿರುವ ಈ ಯೋಜನೆ ಬೆಳಗಾವಿಗೆ, ಅದರಲ್ಲೂ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳಿಗೆ ಆಶೀರ್ವಾದವಾಗಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಮಠದೊಂದಿಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.ಒಬ್ಬ ಕ್ರಿಕೆಟ್ ಆಟಗಾರ ಒಂದೇ ಆಟದಲ್ಲಿ ತೊಡಗಿಸಿಕೊಳ್ಳುತ್ತಾನೆ. ಆದರೆ, ಪತ್ರಕರ್ತ ಒಂದೇ ಹಳಿಯಲ್ಲಿ ಸಾಗಲು ಸಾಧ್ಯವಿಲ್ಲ. ಸಮಾಜ, ಆಡಳಿತ ವ್ಯವಸ್ಥೆ, ಅನ್ಯಾಯ, ಅಭಿವೃದ್ಧಿ, ಬದಲಾವಣೆ ಮತ್ತು ಸುಧಾರಣೆ ಸೇರಿದಂತೆ ಎಲ್ಲವನ್ನೂ ಏಕಕಾಲದಲ್ಲಿ ಗಮನಿಸಬೇಕಾಗುತ್ತದೆ. ಯಾವುದು ತಪ್ಪು, ಯಾವುದು ಸರಿ, ಯಾವುದನ್ನು ಬೆಳೆಸಬೇಕು, ಯಾವುದನ್ನು ತಡೆಯಬೇಕು ಎಂಬುವುದನ್ನು ವಿಶ್ಲೇಷಿಸುವ ಮಹತ್ವದ ಹೊಣೆ ಪತ್ರಕರ್ತರ ಮೇಲಿದೆ ಎಂದರು.ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಹೊಣೆ ಹೊತ್ತು ವಸ್ತುನಿಷ್ಠ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸರ್ಕಾರ ವಿಶೇಷ ಬೆಂಬಲ ನೀಡಬೇಕು. ಅವರ ಬದುಕಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದರು.ಎಐ ಸವಾಲಿಗೆ ತಕ್ಕಂತೆ ಬದಲಾಗಬೇಕು. ಡಿಜಿಟಲ್ ಮಾಧ್ಯಮದ ಬೆಳವಣಿಗೆಯಿಂದ ಪತ್ರಿಕಾ ಕ್ಷೇತ್ರ ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಸುದ್ದಿ ಓದುವ ಹಂತಕ್ಕೂ ಬಂದಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಅಗತ್ಯವೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಕಾಲದ ಬದಲಾವಣೆಗೆ ತಕ್ಕಂತೆ ಪತ್ರಕರ್ತರು ತಮ್ಮ ಕೌಶಲಗಳನ್ನು ವೃದ್ಧಿಸಿಕೊಂಡು, ಹೊಸ ವ್ಯವಸ್ಥೆಯೊಳಗೆ ಬದುಕು ಕಟ್ಟಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು ಎಂದರು.ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಪೈಪೋಟಿಯಲ್ಲಿ ಸುದ್ದಿಯನ್ನು ಮೊದಲು ನೀಡುವ ಧಾವಂತ ಅನಾರೋಗ್ಯಕರ ಸ್ಪರ್ಧೆಯಾಗಿ ಪರಿಣಮಿಸಬಾರದು. ಧಾರ್ಮಿಕ ಹಾಗೂ ಸೂಕ್ಷ್ಮ ವಿಷಯಗಳನ್ನು ಅತಿರಂಜಿತಗೊಳಿಸದೇ ಸಂಯಮ ಮತ್ತು ಹೊಣೆಗಾರಿಕೆಯಿಂದ ವರದಿ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್. ಎಂ ಮಾತನಾಡಿ, ಸುಳ್ಳುಸುದ್ದಿ ಹಾಗೂ ತಪ್ಪು ಮಾಹಿತಿಯ ಹಾವಳಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಮತ್ತು ನೈತಿಕ ಪತ್ರಿಕೋದ್ಯಮ ಅನಿವಾರ್ಯವಾಗಿದೆ. ಸತ್ಯಾಂಶ ಪರಿಶೀಲಿಸಿ ಜನರಿಗೆ ಸರಿಯಾದ ಮಾಹಿತಿ ತಲುಪಿಸುವ ಹೊಣೆ ಮಾಧ್ಯಮದ ಮೇಲಿದೆ ಎಂದು ಎಚ್ಚರಿಸಿದರು.ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರಸಾದ ರಾಂಪೂರೆ ಮಾತನಾಡಿ, ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಿಕಾ ಮಾಧ್ಯಮ ಅತ್ಯಂತ ಬಲಿಷ್ಠವಾಗಿದೆ. ಆದರೆ, ಜರ್ನಲಿಸ್ಟ್‌ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ವಿರಳವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಮಾತನಾಡಿ, ಪತ್ರಿಕೋದ್ಯಮದಲ್ಲಿರುವ ಹಲವಾರು ವಿಭಾಗಗಳಲ್ಲಿನ ಎಲ್ಲ ಕೆಲಸಗಳ ಆಳಜ್ಞಾನ ಅರಿತುಕೊಂಡರೇ ವೃತ್ತಿಯಲ್ಲಿ ಭದ್ರ ಸ್ಥಾನ ಪಡೆದುಕೊಳ್ಳಬಹುದು. ವೃತ್ತಿಯಲ್ಲಿ ಮೇಲು, ಕೀಳು ಎನ್ನದೇ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ಮಹಿಳೆಯರ ಸಮಸ್ಯೆಗಳು ಅನಾವರಣಗೊಳ್ಳಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪತ್ರಿಕಾರಂಗಬರಬೇಕೆಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ತ್ಯಾಗರಾಜ ಕದಂ ಅವರ ಕೃತಿ ಬಿಡುಗಡೆ ಮಾಡಲಾಯಿತು. ಪತ್ರಿಕಾ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಕರ್ತರಾದ ವಿಲಾಸ ಜೋಶಿ, ಶ್ರೀಶೈಲ ಮಠದ, ಶ್ರೀಕಾಂತ್ ಕುಬಕಡ್ಡಿ, ರಮೇಶ ಹಿರೇಮಠ, ಮಂಜುನಾಥ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಶಿವಪೂಜಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರಸಾದ್ ರಾಮಂಪುರೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್, ಬಸವರಾಜ ರೊಟ್ಟಿ ಸೇರಿದಂತೆ ಗಣ್ಯರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತರಿದ್ದರು.ಕನ್ನಡಪ್ರಭದ ಮುಖ್ಯ ಉಪಸಂಪಾದಕ ಸದಾನಂದ ಮಜತಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಸಂಪತ್ ಕುಮಾರ್ ಮುಚಳಂಬಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಚನ್ನಬಸಪ್ಪ ರೊಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಸ್ವಾಗತಿಸಿದರು.

ಕನ್ನಡಪ್ರಭದ ಶ್ರೀಶೈಲ ಮಠದಗೆ ಹಸಿರು ಕ್ರಾಂತಿ ಪ್ರಶಸ್ತಿ ಪ್ರದಾನ

ಕನ್ನಡಪ್ರಭದ ಬೆಳಗಾವಿ ಜಿಲ್ಲೆಯ ಪ್ರಧಾನ ವರದಿಗಾರ ಶ್ರೀಶೈಲ ಮಠದಗೆ ದಿ.ಕಲ್ಯಾಣರಾವ ಮುಚಳಂಬಿ ಅವರ ಸ್ಮರಣಾರ್ಥ ನೀಡುವ ಹಸಿರು ಕ್ರಾಂತಿ ವಾರ್ಷಿಕ ಪ್ರಶಸ್ತಿ, ಸಂಯುಕ್ತ ಕರ್ನಾಟಕದ ಬೆಳಗಾವಿ ಜಿಲ್ಲೆಯ ಮುಖ್ಯ ವರದಿಗಾರ ವಿಲಾಸ್‌ ಜೋಶಿಗೆ ದಿ.ಬಿ.ಎನ್.ಧಾರವಾಡಕರ ಅವರ ಸ್ಮರಣಾರ್ಥ ನೀಡುವ ಸಮದರ್ಶಿ ವಾರ್ಷಿಕ ಪ್ರಶಸ್ತಿ, ನ್ಯೂಸ್‌ ಫಸ್ಟ್‌ನ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ಶ್ರೀಕಾಂತ್‌ ಕುಬಕಡ್ಡಿಗೆ ದಿ.ಶ್ರೀಮತಿ ಸಾವಿತ್ರಿ ಬಿ.ಶಿವಪೂಜಿ ಅವರ ಸ್ಮರಣಾರ್ಥ ನೀಡುವ ಗಡಿ ಕನ್ನಡಿಗ ವಾರ್ಷಿಕ ಪ್ರಶಸ್ತಿ, ತರುಣ ಭಾರತ ಪತ್ರಿಕೆಯ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ರಮೇಶ ಹಿರೇಮಠಗೆ ದಿ.ರಾಘವೇಂದ್ರ ಜೋಶಿ ಅವರ ಸ್ಮರಣಾರ್ಥ ನೀಡುವ ಎರಡನೇ ರಾಜಧಾನಿ ವಾರ್ಷಿಕ ಪ್ರಶಸ್ತಿ, ಬೆಳಗಾವಿ ವೇಣು ಧ್ವನಿ ರೇಡಿಯೋ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿಗೆ ದಿ.ಮಾಯಪ್ಪ ಬಿ.ಮಾವರಕರ ಅವರ ಸ್ಮರಣಾರ್ಥ ನೀಡುವ ಲೋಕ ವಾರ್ತೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪತ್ರಕರ್ತರು ಯಾವುದೇ ಸರ್ಕಾರಿ ಇಲಾಖೆಯ ನಿಯಂತ್ರಣದಲ್ಲಿ ಕೆಲಸ ಮಾಡುವವರಲ್ಲ. ಕುಟುಂಬದ ಜವಾಬ್ದಾರಿಯನ್ನೂ ನಿಭಾಯಿಸಿಕೊಂಡು ಸಮಾಜದ ಒಳಿತಿಗಾಗಿ ದುಡಿಯುವ ಅವರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾರೆ. ಆದರೆ, ಅವರಿಗೆ ದೊರೆಯುವ ಪ್ರೋತ್ಸಾಹ ಮತ್ತು ಭದ್ರತೆ ಕಡಿಮೆಯಾಗಿದೆ. ಅಪಘಾತ, ಅನಾರೋಗ್ಯ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಪತ್ರಕರ್ತರಿಗೆ ನೆರವು, ವಿಮಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಘಟನೆಗಳು ಮುಂದಾಗಬೇಕು.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ ಬೆಳಗಾವಿ.ಪತ್ರಕರ್ತರ ಕೆಲಸ ಹೊರಗೆ ಮೌನವಾಗಿ ಕಾಣಬಹುದು. ಆದರೆ, ಅದು ಸಮಾಜದ ಒಳಗೆ ದೊಡ್ಡ ಸದ್ದು ಮಾಡುತ್ತದೆ. ವ್ಯವಸ್ಥೆಯ ಲೋಪಗಳನ್ನು ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡುವ ವೈದ್ಯರಂತೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ. ಇಂದಿನ ಸಮಾಜದಲ್ಲಿ ಟೊಳ್ಳು ಹೆಚ್ಚಾಗಿದ್ದು, ಗಟ್ಟಿತನ ಕಡಿಮೆಯಾಗಿದೆ. ಯುವಜನರಲ್ಲಿ ಮೌಲ್ಯಗಳ ಬೇರು ದುರ್ಬಲಗೊಳ್ಳುತ್ತಿರುವುದು ಆತಂಕಕಾರಿ. ಇಂತಹ ಸಂದರ್ಭದಲ್ಲಿ ಪತ್ರಕರ್ತರ ಗಟ್ಟಿ ಧ್ವನಿ, ಅಧ್ಯಯನಶೀಲತೆ ಮತ್ತು ಲೇಖನಿಯ ಶಕ್ತಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಸಮಾಜದಲ್ಲಿರುವ ಟೊಳ್ಳುತನವನ್ನು ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ.

-ಪ್ರೊ.ಸಿ.ಎಂ.ತ್ಯಾಗರಾಜ,

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ.

ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಿಕಾ ಮಾಧ್ಯಮ ಅತ್ಯಂತ ಬಲಿಷ್ಠವಾಗಿದೆ. ಆದರೆ, ಜರ್ನಲಿಸ್ಟ್‌ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ವಿರಳವಾಗಿದೆ.

-ಪ್ರಸಾದ ರಾಂಪೂರೆ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರು.ಆಧುನಿಕ ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಕರಗತ ಮಾಡಿಕೊಳ್ಳುವ ಮೂಲಕ ವೃತ್ತಿ ಪ್ರಾವಿಣ್ಯತೆ ಪಡೆಯದುಕೊಳ್ಳಬೇಕು.

-ಬ್ರಹ್ಮಾನಂದ ಹಡಗಲಿ, ಸ್ಥಾನಿಕ ಸಂಪಾದಕರು, ಕನ್ನಡಪ್ರಭ ಬೆಳಗಾವಿ ಆವೃತ್ತಿ.