ಸಾರಾಂಶ
ಪತ್ರಿಕಾ ದಿನಾಚರಣೆ, ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಕಾಲೇಜು ರಂಗ ಬಿಡುಗಡೆ ಸಮಾರಂಭ
ಕನ್ನಡಪ್ರಭ ವಾರ್ತೆ ಕೊಪ್ಪಳಪತ್ರಿಕೆಗಳಲ್ಲಿ ಏನಾದರೂ ಬರೆಯಬೇಕೆಂದರೆ ಓದುವಿಕೆ ಅಭ್ಯಾಸವಾಗಬೇಕು. ಅಂದಾಗ ಮಾತ್ರ ಬರವಣಿಗೆ ಸಿದ್ಧಿಸಲು ಸಾಧ್ಯ. ಓದಬೇಕೆಂದರೆ ಪದಗಳ ಪರಿಚಯ, ಅವುಗಳಿಗಿರುವ ನಾನಾರ್ಥ ಅರಿತಿರಬೇಕು ಎಂದು ಹಿರಿಯ ಪತ್ರಕರ್ತೆ ರಶ್ಮಿ ಎಸ್. ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಸೋಮವಾರ ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಕಾಲೇಜು ರಂಗ ಜುಲೈ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ನುಡಿಚಿತ್ರ ಹಾಗೂ ಹವ್ಯಾಸಿ ಬರವಣಿಗೆ ಕುರಿತು ಮಾತನಾಡಿದರು.ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತು ಪತ್ರಿಕೋದ್ಯಮದಲ್ಲಿ ಇದೆ. ಹಾಗಂತ ಎಲ್ಲವನ್ನೂ ಚಿತ್ರಗಳಲ್ಲೇ ಹೇಳುವುದು ಕಷ್ಟ. ನುಡಿಚಿತ್ರ ಎಂದರೆ ಅಲ್ಲಿ ಚಿತ್ರಗಳೂ ಇರಬೇಕು, ಜೊತೆಗೆ ಪದಗಳೂ ಇರಬೇಕು. ನುಡಿ ಚಿತ್ರದ ಪ್ರಕಾರಗಳನ್ನು ಅರಿತುಕೊಂಡಾಗ ಬರವಣಿಗೆ ಆರಂಭಿಸುವ ಬಗೆ ಗೊತ್ತಾಗುತ್ತದೆ ಎಂದು ಬರವಣಿಗೆ ಕುರಿತು ಮಾಹಿತಿ ನೀಡಿದರು.
ಮಾಧ್ಯಮರಂಗದಲ್ಲಿ ಹೆಣ್ಣಿನ ನೋಟ ಇರುವುದು ನಿಜ. ಆದರೆ ಪತ್ರಕರ್ತೆ ಎನ್ನುವುದು ಸಮಂಜಸವೇ ಹೊರತು, ಮಹಿಳಾ ಪತ್ರಕರ್ತೆ ಎನ್ನುವುದು ಸರಿಯಲ್ಲ. ಪತ್ರಕರ್ತರಾದವರಿಗೆ ದಿಟ್ಟತನ ಇರಬೇಕು. ಆ ದಿಟ್ಟತನ ಹೆಣ್ಣಾಗಲಿ, ಗಂಡಾಗಲಿ ಇಬ್ಬರಿಗೂ ಮುಖ್ಯ. ಪತ್ರಕರ್ತರಿಗೆ ಗಂಡೆದೆ, ಹೆಂಗರುಳು ಎರಡೂ ಇರಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿ, ಪತ್ರಿಕೆ ಹೊರತರುವುದು ಇಂದಿನ ದಿನಗಳಲ್ಲಿ ಸುಲಭದ ಮಾತಲ್ಲ. ಅಂಥದ್ದರಲ್ಲಿ ಕಾಲೇಜಿನ ಪತ್ರಿಕೋದ್ಯಮದ ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕಾಸಕ್ತಿಗೆ, ಬರವಣಿಗೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸಿಗುವ ಗೌರವಧನದಲ್ಲೇ ಶಿಸ್ತುಬದ್ಧ ಪ್ರಾಯೋಗಿಕ ಪತ್ರಿಕೆಯನ್ನು ಹೊರತರುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ ಚಾಮರಾಜ ಸವಡಿ ಮಾಧ್ಯಮದಲ್ಲಿ ಭಾಷಾಂತರದ ಮಹತ್ವ ಮತ್ತು ಕೌಶಲ್ಯಗಳ ಕುರಿತು ಮಾತನಾಡಿ, ಭಾಷಾಂತರದ ಕೌಶಲ್ಯ ಹೇಳಿಕೊಡಲು ಸಿದ್ಧವಿದ್ದು, ಕಲಿಯುವವರ ತಾಳ್ಮೆ ಅಗತ್ಯ. ಅದು ಗಂಟೆಯೊಂದರಲ್ಲೇ ಮನದಟ್ಟು ಮಾಡುವುದು ಕಷ್ಟಸಾಧ್ಯ. ಆದರೆ ಭಾಷಾಂತರದ ಮಹತ್ವ ಮನನ ಮಾಡಬಹುದು. ಪದಸಂಪತ್ತು ಗೊತ್ತಿದ್ದರೆ ಭಾಷಾಂತರ ಸುಲಭ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ತಿಮ್ಮಾರಡ್ಡಿ ಮಾತನಾಡಿ, ಪತ್ರಿಕಾ ದಿನಾಚರಣೆಯ ಹಿನ್ನೆಲೆ, ಪತ್ರಿಕೋದ್ಯಮ ಕೋರ್ಸ್‌ನ ಪ್ರಯೋಜನ ವಿವರಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಬಿ. ನೆಲಾಗಣಿ ನಿರೂಪಿಸಿದರು. ಪೂಜಾ ಮತ್ತು ಚೈತ್ರಾ ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಪ್ರಕಾಶ್ ಬಳ್ಳಾರಿ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ವಾಸುದೇವ ಬುರ್ಲಿ ವಂದಿಸಿದರು.ಕಾಲೇಜಿನ ಬೋಧಕ ಸಿಬ್ಬಂದಿ ಡಾ. ಭಾಗ್ಯಜ್ಯೋತಿ, ಗಾಯತ್ರಿ ಭಾವಿಕಟ್ಟಿ, ಗಿರಿಜಾ ತುರಮುರಿ, ಗೀತಾ ಬನ್ನಿಕೊಪ್ಪ, ಲತಾ ಪಾಟೀಲ, ಪ್ರವೀಣ್, ಸಿ. ಬಸವರಾಜ, ಶಿವಮೂರ್ತಿಸ್ವಾಮಿ ಗುತ್ತೂರು, ಡಾ. ತುಕಾರಾಂ ನಾಯಕ್, ಡಾ. ವೀರಣ್ಣ ಸಜ್ಜನರ್, ಶಿವಬಸಪ್ಪ ಮಸ್ಕಿ, ಎಂ. ಶಿವಣ್ಣ, ಗುರುಬಸವರಾಜ, ಮಾರುತಿ, ಬೋಧಕೇತರ ಸಿಬ್ಬಂದಿ ರಮೇಶ್, ಹಸನ್, ಜಯಪ್ರಕಾಶ ಬಿರಾದಾರ, ಸುರೇಶ ಮತ್ತಿತರರು ಇದ್ದರು.